ವಿಶ್ವನಾಥ್‌ ರಾಜೀನಾಮೆ ವಾಪಸ್‌ ಪಡೆಯುತ್ತಾರೆ| ಅವರ ಮಾರ್ಗದರ್ಶನದಲ್ಲೇ ಜೆಡಿಎಸ್‌ ಮುನ್ನಡೆಯಲಿದೆ| ಆದರೆ ನನ್ನ ರಾಜೀನಾಮೆ ಹೇಳಿಕೆಗೆ ಈಗಲೂ ಬದ್ಧ ಎಂದ ಸಂಸದ

ಹಾಸನ[ಮಜೂ.07]: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್‌.ವಿಶ್ವನಾಥ್‌ ಅವರನ್ನು ಮನವೊಲಿಸಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಅವರು ರಾಜೀನಾಮೆ ವಾಪಸ್‌ ಪಡೆಯಲಿದ್ದಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್‌ ಅವರು ಕೆಲವು ಸಣ್ಣಪುಟ್ಟವಿಚಾರಗಳಿಗೆ ಬೇಸರಗೊಂಡಿದ್ದಾರೆ. ಜೆಡಿಎಲ್‌ಪಿ ಸಭೆಯಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೇರಿದಂತೆ ಎಲ್ಲ ಶಾಸಕರು ವಿಶ್ವನಾಥ್‌ ಅವರ ಮನವೊಲಿಸಿದ್ದಾರೆ. ಮುಂದೆ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸಲಾಗುತ್ತದೆ ಎಂದರು. ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ನೀಡಿರುವ ಹೇಳಿಕೆ ಪ್ರಶ್ನೆಗೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗಾಗಿ ಲೋಕಸಭಾ ಸ್ಥಾನ ತ್ಯಾಗ ಮಾಡುವ ಕುರಿತ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ನನ್ನ ರಾಜೀನಾಮೆ ವಿಚಾರವನ್ನು ಈಗಾಗಲೇ ದೊಡ್ಡವರ ಮುಂದೆ ಇಟ್ಟಿದ್ದೇನೆ. ಇದೇ ತಿಂಗಳ 17 ಅಥವಾ 18 ರಂದು ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಿ ಅವರು ಅವಕಾಶ ಕಲ್ಪಿಸಿದ್ದಾರೆ. ಅದಾದ ಬಳಿಕವೂ ದೇವೇಗೌಡರನ್ನು ಮನವೊಲಿಸುತ್ತೇವೆ ಎಂದರು.