ಬೆಂಗಳೂರು[ಜು.09]: ಅತೃಪ್ತ ಶಾಸಕರ ಭಿನ್ನಮತ ಶಮನಕ್ಕಾಗಿ ಸಚಿವ ಸ್ಥಾನದ ಆಫರ್‌ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಥ್ಯಾಂಕ್ಸ್‌. ಆದರೆ, ನಾವು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಜೆಡಿಎಸ್‌ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅತೃಪ್ತ ಶಾಸಕ ಎಚ್‌.ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು ಸಚಿವರಾಗಲು ಅಥವಾ ಅಧಿಕಾರಕ್ಕಾಗಿ ಮೈತ್ರಿ ಸರ್ಕಾರದಿಂದ ಹೊರಗೆ ಬಂದಿಲ್ಲ. ಸರ್ಕಾರ ನಡೆಸಿಕೊಂಡ ರೀತಿಯಿಂದಾಗಿ ಬೇಸತ್ತು ಎಲ್ಲಾ ಅತೃಪ್ತರು ಹೊರಗೆ ಬಂದಿದ್ದೇವೆ. ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲಾ ಈ ನಿಲುವನ್ನು ಕೈಗೊಂಡಿದ್ದೇವೆ. ಸಿದ್ದರಾಮಯ್ಯ ಅವರು ಸಚಿವ ಸ್ಥಾನದ ಆಫರ್‌ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು. ಆದರೆ, ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು.

ಅತೃಪ್ತರೆಲ್ಲರದ್ದೂ ಒಂದೇ ನಿರ್ಧಾರ. ರಾಜೀನಾಮೆ ನೀಡಿರುವುದು ಸಚಿವ ಸ್ಥಾನ ಸಿಗುತ್ತದೆ ಎಂಬುದಾಗಲಿ ಅಥವಾ ಅಧಿಕಾರ ಸಿಗಲಿದೆ ಎಂಬ ಕಾರಣಕ್ಕಾಗಿ ಅಲ್ಲ. ಸರ್ಕಾರ ಬಗ್ಗೆ ಬೇಸರ ಇದ್ದ ಕಾರಣ ರಾಜೀನಾಮೆ ನೀಡಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ನಿರ್ಧಾರ ಬದಲಿಸಬೇಕಾಯಿತು ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬೆನ್ನಿಗೆ ಚೂರಿ ಹಾಕಿದರು ಎಂಬ ಶಾಸಕ ಶಿವಲಿಂಗೇಗೌಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ತಮಗೆ ಮತ್ತೊಂದು ಅವಕಾಶ ನೀಡಿದ ದೇವೇಗೌಡರ ಬಗ್ಗೆ ತಮಗೆ ಅಪಾರವಾದ ಗೌರವ ಇದೆ. ಅದು ಎಂದಿಗೂ ಕಡಿಮೆಯಾಗುವುದಿಲ್ಲ. ಅವರ ಸಹಕಾರವನ್ನು ಮರೆಯುವುದಿಲ್ಲ. ಆದರೆ, ನಮಗಾದ ಅವಮಾನಗಳ ಬಗ್ಗೆ ಅವರಿಗೆ ಗೊತ್ತಿದ್ದರೂ ಮೂಕ ಪ್ರೇಕ್ಷಕರಾಗಿದ್ದರು. ಇದು ನಮಗೆ ಬೇಸರ ತಂದಿದೆ ಎಂದು ತಿಳಿಸಿದರು.

ಅತೃಪ್ತರನ್ನು ಭೇಟಿಯಾಗಲು ಯಾರೇ ಬಂದರೂ ಅಥವಾ ಯಾರೇ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಈಗಾಗಲೇ ನಾವೆಲ್ಲಾ ಒಗ್ಗಟ್ಟಾಗಿ ನಿರ್ಧಾರ ಕೈಗೊಂಡಿದ್ದೇವೆ. ಸಚಿವ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರವನ್ನು ಉಳಿಸಲು ಏನು ಮಾಡಬೇಕೋ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಫಲವಾಗುವುದಿಲ್ಲ. ಅತೃಪ್ತರು ಒಗ್ಗಟ್ಟಾಗಿದ್ದೇವೆ ಎಂದರು.