ಬೆಂಗಳೂರು(ಆ.6) ಹತ್ತು ಹಲವು ಲೆಕ್ಕಾಚಾರ ಹಾಕಿ ವಿಶ್ವನಾಥರಿಗೆ ಮಾಜಿ ಪ್ರಧಾನಿ ದೇವೆಗೌಡ ಜೆಡಿಎಸ್ ನ ಪಟ್ಟ ಕಟ್ಟಿದ್ದಾರೆ. ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಯೋಜನೆ ಹಾಕಿಕೊಂಡಿರುವ ದೇವೇಗೌಡರ ಮೊದಲ ಕಾರ್ಯಾಚರಣೆ ಇದಾಗಿದೆ.

ಕೇವಲ ಇಷ್ಟೆ ಅಲ್ಲ. ಸರ್ಕಾರದ ವೇಗಕ್ಕೆ ಬ್ರೇಕ್ ಹಾಕುತ್ತಿರುವ ಸಿದ್ಧರಾಮಯ್ಯರನ್ನು ಕಟ್ಟಿಹಾಕಲು ದೇವೆಗೌಡರು ತಂತ್ರ ಹಣೆದಿದ್ದಾರೆ. ಕುರುಬ ಸಮಾಜದ ನಾಯಕನನ್ನು ಅಧ್ಯಕ್ಷರಾಗಿಸುವ ಮೂಲಕ ಸಿದ್ಧರಾಮಯ್ಯ ಪ್ರಭಾವ ಕಡಿಮೆ ಮಾಡುವುದು ದೇವೇಗೌಡರ ಇನ್ನೊಂದು ಲೆಕ್ಕಾಚಾರ.

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಅಸ್ತ್ರವಿದು

ಸಿದ್ಧರಾಮಯ್ಯರ ಆಕ್ಷೇಪಗಳಿಗೆ ವಿಶ್ವನಾಥ್ ಮೂಲಕ ತಿರುಗೇಟು ಕೊಡಲು ಸಾಧ್ಯವಿದೆ ಎಂಬುದನ್ನು ದೇವೇಗೌಡ ಮನಗಂಡಿದ್ದಾರೆ. ಸಿದ್ಧರಾಮಯ್ಯರನ್ನು ಕಂಟ್ರೋಲ್ ಮಾಡುವ ರಾಜಕೀಯ ಸಾಮರ್ಥ್ಯ ಹೊಂದಿರುವುದು ವಿಶ್ವನಾಥ್ ಮಾತ್ರ ಎಂಬ ಅರಿವು ದೇವೇಗೌಡರಿಗಿದೆ.

ಇನ್ನೊಂದು ಕಡೆ ಸಮನ್ವಯ ಸಮಿತಿಗೆ ಎಚ್ .ವಿಶ್ವನಾಥರನ್ನು ಸೇರ್ಪಡೆ ಮಾಡಿ ಸಿದ್ದರಾಮಯ್ಯರಿಗೆ ಬ್ರೇಕ್ ಹಾಕುವುದು ದೇವೇಗೌಡರ ಚದುರಂಗದಾಟದ ಮತ್ತೊಂದು ನಡೆ. ಕುರುಬ ಸಮುದಾಯದ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಬೇಕು. ಪ್ರಮುಖವಾಗಿ ಕುರುಬ ಸಮುದಾಯವನ್ನು ಜೆಡಿಎಸ್ ಕಡೆ ಆಕರ್ಷಣೆ ಮಾಡಲು ದೇವೇಗೌಡರು ವಿಶ್ವನಾಥ್ ಅವರನ್ನೇ ಆಯ್ಕೆ ಮಾಡಿದ್ದಾರೆ.