Asianet Suvarna News Asianet Suvarna News

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಅಸ್ತ್ರವಿದು

ಇದೀಗ ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಕುರುಬ ಸಮುದಾಯ ಎಚ್ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಚಾಣಾಕ್ಷ ಹೆಜ್ಜೆ ಇಟ್ಟಿದ್ದಾರೆ.

H Vishwanath Replace HD Kumaraswamy As JDS President
Author
Bengaluru, First Published Aug 6, 2018, 9:01 AM IST

ಬೆಂಗಳೂರು :  ಉತ್ತಮ ವಾಗ್ಮಿ ಹಾಗೂ ಪ್ರಬಲ ಕುರುಬ ಸಮುದಾಯದ ಹಿರಿಯ ನಾಯಕ ಅಡಗೂರು ಎಚ್.ವಿಶ್ವನಾಥ್ ಅವರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಚಾಣಾಕ್ಷ ಹೆಜ್ಜೆ ಇಟ್ಟಿದ್ದಾರೆ. 

ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜೆಡಿಎಸ್ ನಾಯಕರಿಗೆ ಹಲವು ಬಾರಿ ಇರಿಸು ಮುರುಸು ಉಂಟಾಗಿದ್ದು ಉಭಯ ಪಕ್ಷಗಳ ಹಿರಿಯ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರಸೆಯಿಂದ. ಏಟಿಗೆ ಏದಿರೇಟು ಎಂಬಂತೆ ಸಿದ್ದರಾಮಯ್ಯ ಅವರ ಮೈಸೂರು ಜಿಲ್ಲೆಯ ರಾಜಕಾರಣವನ್ನು ಅರೆದು ಕುಡಿದಿರುವ ಹಾಗೂ ಅವರದೇ ಕುರುಬ ಸಮುದಾಯಕ್ಕೆ ಸೇರಿದ ವಿಶ್ವನಾಥ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಹಿಂದೆ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ವಿಶ್ವನಾಥ್. ಇದೀಗ ಬದಲಾದ  ರಾಜಕೀಯ ಸನ್ನಿವೇಶದಲ್ಲಿ ಅದೇ ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ನೇಮಕಗೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಇದ್ದ ವೇಳೆಯೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕುತ್ತಿದ್ದ ವಿಶ್ವನಾಥ್ ಇದೀಗ ಮತ್ತೊಂದು ಪಕ್ಷದಲ್ಲಿದ್ದು ಎದಿರೇಟು ನೀಡಲು ಸಜ್ಜಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಹೊತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಹೊರೆಯಿಂದ ಮುಕ್ತಿ ನೀಡಬೇಕು ಎಂಬ ಆಲೋಚನೆ ದೇವೇಗೌಡರಿಗೆ ಹೊಳೆದ ಸಂದರ್ಭದಲ್ಲೇ ಮೊದಲು ನೆನಪಾಗಿದ್ದು ವಿಶ್ವನಾಥ್ ಅವರ ಹೆಸರು. ಇದಕ್ಕೆ ಕುಮಾರಸ್ವಾಮಿ ಅವರೂ ಸಮ್ಮತಿಸಿದರು. 

ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ವೇಳೆಯೆಲ್ಲ ಅವರು ಕುರುಬ ಸಮುದಾಯದ ವಿರೋಧಿ ಎಂಬ ಕೂಗು ಆ ಸಮುದಾಯದ ಮುಖಂಡರಿಂದ ಕೇಳಿಬರುತ್ತಿತ್ತು. ಈಗ ಅದೇ ಸಮುದಾಯದ ವಿಶ್ವನಾಥ್ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ತಿರುಗೇಟು ನೀಡುವುದಕ್ಕೂ ಅಸ್ತ್ರ ನೀಡಿದಂತಾಗುತ್ತದೆ. 

Follow Us:
Download App:
  • android
  • ios