ಚನ್ನಪಟ್ಟಣ, ರಾಮನಗರ ಎರಡೂ ಕಡೆ ಸ್ಪರ್ಧೆ: ಎಚ್ಡಿಕೆ

First Published 22, Mar 2018, 12:49 PM IST
H D Kumaraswamy to contest from both Ramnagara and chennapattana
Highlights

 ಮಾಜಿ ಮುಖ್ಯಮಂತ್ರಿ ನಿಲುವಿಗೆ ರಾಮನಗರ ಕಾರ್ಯಕರ್ತರ ವಿರೋಧ - ಅನಿತಾರನ್ನು ಕಣಕ್ಕಿಳಿಸುವಂತೆ ಒತ್ತಡ

ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ತಮ್ಮ ನಿರ್ಧಾರ ಪ್ರಕಟಿಸಿದರು.

ನಗರದಲ್ಲಿ ನಡೆದ ರಾಮನಗರ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ, ಕುಮಾರಸ್ವಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಚ್ಡಿಕೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ. ಜೆಡಿಎಸ್‌ ವರಿಷ್ಠರಿಗೆ .30 ಕೋಟಿ ನೀಡಿರುವುದಾಗಿ ಅಪಪ್ರಚಾರ ಮಾಡುತ್ತಿರುವ ಅಲ್ಲಿನ ಶಾಸಕ ಸಿ.ಪಿ.ಯೋಗೇಶ್ವರ್‌ ದುರಾಂಹಕಾರವನ್ನು ನಿಯಂತ್ರಿಸಬೇಕಾಗಿದೆ ಎಂದರು.

ಕಣ್ಣೀರಿಟ್ಟ ಕುಮಾರಸ್ವಾಮಿ:

ಈ ವೇಳೆ ಭಾವಾವೇಶಕ್ಕೆ ಒಳಗಾದ ಕುಮಾರಸ್ವಾಮಿ, ರಾಮನಗರ ನನ್ನ ಕರ್ಮಭೂಮಿ. ಹುಟ್ಟಿದ್ದು ಹೊಳೆನರಸೀಪುರದಲ್ಲಿ. ಈ ದೇಹ ಮಣ್ಣಾಗುವುದು ರಾಮನಗರದಲ್ಲಿ. ಕ್ಷೇತ್ರದ ಜನರು ತೋರಿಸುತ್ತಿರುವ ಪ್ರೀತಿ ಹಾಗೂ ತಮ್ಮ ಮೇಲಿಟ್ಟಿರುವ ವಿಶ್ವಾಸ ಅಪಾರ ಎಂದು ಕಣ್ಣೀರಿಟ್ಟರು.

ಚನ್ನಪಟ್ಟಣದಲ್ಲಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ದೇವೇಗೌಡ ಮತ್ತು ನನ್ನ ನಿಲುವಾಗಿದೆ. ಆದರೆ, ಅಲ್ಲಿನ ಕಾರ್ಯಕರ್ತರು ಅನಿತಾರನ್ನು ಕಣಕ್ಕೆ ಇಳಿಸಲು ಪಟ್ಟು ಹಿಡಿದಿದ್ದಾರೆ. ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿರುವುದರಿಂದ ಚನ್ನಪಟ್ಟಣದ ಮುಖಂಡರು ನೀವೇ ಸ್ಪರ್ಧಿಸಿ ಎಂದು ಪಟ್ಟು ಹಿಡಿದಿದ್ದಾರೆ. ನೀವುಗಳು ಆಶೀರ್ವದಿಸಿದರೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತರು ಅನಿತಾ ಅವರನ್ನು ಕಣಕ್ಕಿಳಿಸಿ ಎಂದು ಕೂಗಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಚನ್ನಪಟ್ಟಣ ಕ್ಷೇತ್ರದ ಮುಖಂಡರು ನೀವೇ ಬೇಕು ಎಂದು ಪಟ್ಟು ಹಿಡಿದರು. ರಾಮನಗರ ಕಾರ್ಯಕರ್ತರು ಎರಡು ದಿನಗಳಲ್ಲಿ ಚಿಂತಿಸಿ ಸ್ಪಷ್ಟಅಭಿಪ್ರಾಯವನ್ನು ತಿಳಿಸುವಂತೆ ಹೇಳಿ ಕುಮಾರಸ್ವಾಮಿ ಹೊರನಡೆದರು.

ಟಿಕೆಟ್‌ಗಾಗಿ ಕುಟುಂಬ ಇಬ್ಭಾಗವಾಗಲು ಬಿಡಲ್ಲ:

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ನಮ್ಮ ಕುಟುಂಬದಲ್ಲಿ ಕಲಹ ನಡೆದು ಇಬ್ಭಾಗವಾಗುವ ಪರಿಸ್ಥಿತಿ ನಿರ್ಮಾಣವಾದರೆ ನಾನೇ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಕುಮಾರಸ್ವಾಮಿ ಭಾವುಕರಾದರು.

ಈ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತೇವೆ. ಮೂರನೇ ಅಭ್ಯರ್ಥಿಯಾಗಿ ಯಾರೂ ಕಣಕ್ಕಿಳಿಯುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕುಟುಂಬದಲ್ಲಿ ಯಾರಾದರು ಪಟ್ಟು ಹಿಡಿದು ಕಲಹ ಉಂಟಾಗುವ ಪರಿಸ್ಥಿತಿ ಬಂದರೆ ನಾನೇ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದರು.

ವಿಪ್‌ ಬಗ್ಗೆ ಈಗೇಕೆ ಭಯ?:

‘ರಾಜ್ಯಸಭಾ ಚುನಾವಣೆ ವೇಳೆ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ್ದ ಬಂಡಾಯ ಶಾಸಕರಿಗೆ ಇದೀಗ ಅದರ ಭಯವೇಕೆ?. ವಿಪ್‌ ಎಂದರೇನು?, ಅದಕ್ಕಿರುವ ಬೆಲೆ ಏನೆಮಭುದು ಅವರಿಗೆ ಅರಿವಾಗಿರಬೇಕು’ ಎಂದರು.

‘ಬಂಡಾಯ ಶಾಸಕರು, ಕಾಂಗ್ರೆಸ್‌ ಅಭ್ಯರ್ಥಿಗಳಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮದು ಸಣ್ಣ ಪಕ್ಷ. ಅವರಿಗೆಲ್ಲ ನಮ್ಮ ಪಕ್ಷದಲ್ಲಿ ಕೆಲಸ ಮಾಡಲು ಆಗಲ್ಲ. ಅವರ ಶಕ್ತಿ ತೋರಿಸಲು ದೊಡ್ಡ ಪಕ್ಷಗಳೇ ಬೇಕು’ ಎಂದು ವ್ಯಂಗ್ಯವಾಡಿದರು.

loader