ಬೆಂಗಳೂರು[ಮಾ.11]: ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಎಚ್ಚರಿಕೆಯಿಂದ ಉತ್ತರ ಕೊಡಬೇಕಾಗಿತ್ತು. ಮಾಧ್ಯಮದವರು ಉತ್ತೇಜಿಸಿದ್ದಕ್ಕೆ ರೇವಣ್ಣ ಆ ರೀತಿ ಮಾತನಾಡಿದ್ದಾರೆ. ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕುಮಾರಸ್ವಾಮಿ ಅವರು ರೇವಣ್ಣ ಅವರ ಅವಹೇಳನಕಾರಿ ಹೇಳಿಕೆ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದರು.

ಅಯ್ಯೋ ಪಾಪ ರೇವಣ್ಣ: ಹಾಡಿನ ಮೂಲಕವೇ ನೀರಿಳಿಸಿದೆ ಸುವರ್ಣ!

ಮಾಧ್ಯಮದವರು ತಮ್ಮ ಪ್ರಶ್ನೆಗಳ ಮೂಲಕ ರೇವಣ್ಣ ಅವರನ್ನು ಟೆಂಪ್ಟ್‌ ಮಾಡಿದ್ದಾರೆ. ಅಲ್ಲದೆ ರೇವಣ್ಣ ಮಾಡಿರುವುದನ್ನು ಎಡಿಟ್‌ ಮಾಡಿ ವಿವಾದಾತ್ಮಕ ಅಂಶಗಳನ್ನು ಮಾತ್ರ ಪ್ರಕಟಿಸಿದ್ದಾರೆ. ನಮ್ಮ ಕುಟುಂಬದ ಯಾರಿಂದಲೂ ಯಾವ ಹೆಣ್ಣುಮಕ್ಕಳಿಗೂ ಅವಮಾನ ಮಾಡಿಲ್ಲ. ಆದರೂ ರೇವಣ್ಣ ಅವರು ಮಾಧ್ಯಮದವರ ಬಳಿ ಎಚ್ಚರಿಕೆಯಿಂದ ಉತ್ತರ ಕೊಡಬೇಕಾಗಿತ್ತು. ಇಲ್ಲದಿದ್ದರೆ ಇಂತಹ ಮುಜುಗರದ ಸಂದರ್ಭ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ರೇವಣ್ಣ ಯಾವುದೇ ದುರುದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ರೇವಣ್ಣನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಇದನ್ನು ಅನಗತ್ಯ ವಿವಾದ ಮಾಡುವುದು ಬೇಡ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ನಾಲಿಗೆ ಹರಿಬಿಟ್ಟದ್ದು ರೇವಣ್ಣ, ಕ್ಷಮೆ ಕೇಳಿದ್ದು ಪಕ್ಷ!

ರೇವಣ್ಣ ಸಾಹೇಬ್ರು ಆ ರೀತಿ ಮಾತಾಡಬಾರದಿತ್ತು ...

‘ಸಚಿವ ರೇವಣ್ಣ ಸಾಹೇಬ್ರು ಮಹಿಳೆಯರ ಬಗ್ಗೆ ಮಾಡಿದ ಆಡಿದ ಮಾತಿಗೆ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ನಿಖಿಲ್ ಕುಮಾರ ಸ್ವಾಮಿ ತಿಳಿಸಿದ್ದಾರೆ.

ಪಾಂಡವ ಪುರ ತಾಲೂಕಿನ ಚಿನಕುರಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಬಗ್ಗೆ ಮಾತ್ರವಲ್ಲ ಯಾವುದೇ ಮಹಿಳೆಯರ ಬಗ್ಗೆ ಇಂತಹ ಅಗೌರವದ ಮಾತುಗಳನ್ನು ಹೇಳಬಾರದಿತ್ತು. ಸಿಎಂ ಕುಮಾರಸ್ವಾಮಿ ಸಹ ಕ್ಷಮೆ ಕೇಳಿದ್ದಾರೆ. ನಾನು ಕೂಡ ಬಹಿರಂಗವಾಗಿ ಈ ವಿಷಯದಲ್ಲಿ ಕ್ಷಮೆ ಕೇಳುತ್ತೇನೆ ಎಂದರು.