ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ವಿಡಿಯೋ ಒಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಂಟ್‌ಗೆ ಸಿಡಿದ ಕೊಳೆಯನ್ನು ಅವರ ಅಂಗರಕ್ಷಕ ಸ್ವಚ್ಛಗೊಳಿಸಿದ ಸುದ್ದಿ ವೈರಲ್ ಆಗಿದ್ದು ಇದೀಗ ಅದಕ್ಕೆ ಡಿಸಿಎಂ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಬೆಂಗಳೂರು : ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಂಗಳವಾರ ನಡೆಸಿದ ನಗರ ಪ್ರದಕ್ಷಿಣೆ ವೇಳೆ ಅವರ ಶೂ ಮತ್ತು ಪ್ಯಾಂಟ್‌ಗೆ ಸಿಡಿದ ಕೊಳೆಯನ್ನು ಅವರ ಅಂಗರಕ್ಷಕ ಸ್ವಚ್ಛಗೊಳಿದ ವಿಡಿಯೋ ವೈರಲ್ ಆಗಿತ್ತು. ಹಲಸೂರಿನ ಗುರುದ್ವಾರದ ಬಳಿ ರಾಜಕಾಲುವೆ ಪರಿಶೀಲನೆ ವೇಳೆ ರಸ್ತೆಯಲ್ಲಿನ ಕೊಳೆ ಪರಮೇಶ್ವರ್ ಅವರ ಶೂ ಮತ್ತು ಪ್ಯಾಂಟ್‌ಗೆ ಸಿಡಿದಿತ್ತು. ಇದನ್ನು ಸ್ಥಳದಲ್ಲಿದ್ದ ಅವರ ಬೆಂಬಲಿಗರು ಸ್ವಚ್ಛಗೊಳಿಸಲು ಮುಂದಾದಾಗ ಪರಮೇಶ್ವರ್ ನಿರಾಕರಿಸಿದರು. 

ನಂತರ ಅವರ ಅಂಗರಕ್ಷಕರೊಬ್ಬರು ಬಾಟಲ್ ನೀರು ತಂದು ಸ್ವಚ್ಛಗೊಳಿಸಿದ್ದರು. ಈ ವೀಡಿಯೋ ವೈರಲ್‌ಆಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪರಮೇಶ್ವರ್, ಸಣ್ಣ ಸುದ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು

ನೋವು ತರಿಸಿದೆ : ಇದರ ಬೆನ್ನಲ್ಲೇ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಅಂಗರಕ್ಷಕ ಕೊಳೆಯನ್ನು ಸ್ವಚ್ಛಗೊಳಿಸಿದ್ದು, ಆ ಕ್ಷಣದಲ್ಲಿ ಮಾಡಿದ ಸ್ವಾಭಾವಿಕ ಸಹಾಯವೇ ಹೊರತು, ಬಲವಂತವಾಗಿ ಅಥವಾ ಆಜ್ಞಾಪೂರ್ವಕವಾಗಿ ಮಾಡಿದ್ದಲ್ಲ. ಇದನ್ನು ಅದೇ ರೀತಿ ನೋಡ ಬೇಕೇ ಹೊರತು, ಅನ್ಯ ದೃಷ್ಟಿಕೋನ ದಲ್ಲಿ ನೋಡುವುದಲ್ಲ. ಹಗಲು ರಾತ್ರಿ ನನ್ನ ಜೊತೆ ಕೆಲಸ ಮಾಡುವ ನನ್ನ ಸಿಬ್ಬಂದಿಯನ್ನು ನಾನು ನನ್ನ ಕುಟುಂಬ ಸದಸ್ಯರೆಂದೇ ಭಾವಿಸಿದ್ದೇನೆ.

ಅವರೇ ನನ್ನ ಶಕ್ತಿ, ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಿಬ್ಬಂದಿಯನ್ನು ತಪ್ಪಾಗಿ ನಡೆಸಿ ಕೊಂಡಿದ್ದೇನೆ ಎಂಬ ಮಾತುಗಳು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Scroll to load tweet…