ಅಹ್ಮದಾಬಾದ್ :  ಸಲಿಂಗಕಾಮಿ ಮಹಿಳೆಯರಿಬ್ಬರು ನೊಂದು ಮೂರು ವರ್ಷದ ಮಗುವಿನೊಂದಿಗೆ  ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ಸಬರಮತಿ ನದಿಗೆ ಹಾರಿ ಇಬ್ಬರೂ ಸಾವನ್ನಪ್ಪಿದ್ದಾರೆ. 

ಮೃತರನ್ನು 30 ವರ್ಷದ ಆಶಾ ಠಾಕೂರ್ ಹಾಗೂ 28 ವರ್ಷದ ಭಾವನಾ ಠಾಕೂರ್ ಎಂದು ಗುರುತಿಸಲಾಗಿದ್ದು, ಗುಜರಾತಿ ಬಜಾರ್ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. 

ನೀರಿನಿಂದ ಮೇಲಕ್ಕೆತ್ತುವಾಗ 3 ವರ್ಷದ ಪುಟ್ಟ ಮಗುವಿನ ಉಸಿರಾಟ ಇನ್ನೂ ಕೂಡ ನಿಂತಿರಲಿಲ್ಲ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯ ಮಗು ಕೊನೆಯುಸಿರೆಳೆದಿದೆ. 

ಈ ರೀತಿಯ ಸಂಬಂಧಕ್ಕೆ ಹಲವರಿಂದ ಅಡೆತಡೆಗಳಿದ್ದು, ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 

ನಮ್ಮ ಸಂಬಂಧಕ್ಕೆ ಇಲ್ಲಿ ಒಪ್ಪಿಗೆ ಇಲ್ಲ, ಈ ಜಗತ್ತನ್ನು ಬಿಟ್ಟು ಹೋಗೋಣ, ಇಲ್ಲಿ ನಮಗೆ ಒಂದಾಗಿ ಬಾಳಲು ಬಿಡುವುದಿಲ್ಲ ಎಂದು ಪರಸ್ಪರ ಸಂದೇಶ ರವಾನಿಸಿಕೊಂಡಿದ್ದಾರೆ. 

ಆಶಾ ಠಾಕೂರ್ ಗೆ 10 ವರ್ಷದ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರೆ, ಭಾವನಾಗೂ ಕೂಡ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಇದೀಗ ಇಬ್ಬರೂ ಕೂಡ ತಮ್ಮ ಸಂಬಂಧದ ಬಗ್ಗೆ ಸಮಾಜದಲ್ಲಿ ಒಪ್ಪಿಗೆ ಇಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.