ಮಂಗಳೂರು (ಜು.21): ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡುವೆಯೇ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜುಗಳ 162 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ದಿಢೀರನೆ ನಿಯೋಜನೆ(ಡೆಪ್ಯುಟೇಶನ್‌) ಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ನಿಯೋಜನೆ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಯಂ ಉಪನ್ಯಾಸಕರ ಈ ಬೇಕಾಬಿಟ್ಟಿನಿಯೋಜನೆಯಿಂದಾಗಿ ಅರೆಕಾಸಿನ ಗೌರವ ವೇತನ ಪಡೆಯುವ ಅತಿಥಿ ಉಪನ್ಯಾಸಕರ ಉದ್ಯೋಗಕ್ಕೂ ಕುತ್ತು ಬಂದಿದೆ.

ಹೀಗೆ ಸಿಬ್ಬಂದಿ ಒಂದು ವರ್ಷದ ಹಿಂದೆಯಷ್ಟೆಕಾಯಂಗೊಂಡು ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಏಪ್ರಿಲ್‌ನಲ್ಲಿ 140 ಮಂದಿ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಇದೇ ರೀತಿ ನಿಯೋಜನೆಗೊಳಿಸಲಾಗಿತ್ತು. ಇದೀಗ ಮೂರು ತಿಂಗಳ ಅವಧಿಯಲ್ಲಿ ಅಂದರೆ, ಈ ಶೈಕ್ಷಣಿಕ ವರ್ಷಾರಂಭದಲ್ಲಿ ಮತ್ತೆ ನಿಯೋಜನೆಗೊಳಿಸಿ ಆದೇಶಿಸಲಾಗಿದೆ.

ಕಳೆದ ವರ್ಷವಷ್ಟೇ ಕಾಯಂ ಉಪನ್ಯಾಸಕರಾಗಿ ನೇಮಕಗೊಂಡ ಸುಮಾರು 1,300 ಸಿಬ್ಬಂದಿ ಪೈಕಿ ಇಷ್ಟೊಂದು ಪ್ರಮಾಣದಲ್ಲಿ ಅಂದರೆ ಶೇ.50ರಷ್ಟುಸಿಬ್ಬಂದಿ ನಿಯೋಜನೆಗೊಳ್ಳುತ್ತಿದ್ದಾರೆ. ಇಷ್ಟುಮಾತ್ರವಲ್ಲದೆ ಶೀಘ್ರವೇ ಮೂರನೇ ಹಂತದ ನಿಯೋಜನೆಗೆ ಪಟ್ಟಿಸಿದ್ಧಗೊಳ್ಳುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಕೆಲ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಲ್ಲದೆ ಕೇವಲ ಅತಿಥಿ ಉಪನ್ಯಾಸಕರೇ ಪಾಠ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಈ ಬೆಳವಣಿಗೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಮೇಲೆ ಅಡ್ಡಪರಿಣಾಮ ಬೀರುವ ಭೀತಿ ವ್ಯಕ್ತವಾಗುತ್ತಿದೆ.

ವೈಯಕ್ತಿಕ ಕಾರಣಗಳೇ ಹೆಚ್ಚು:

ಆಯಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳ ಒತ್ತಡ ಇಲ್ಲದಿದ್ದರೆ ಅಥವಾ ಅವಶ್ಯಕತೆ ಇರುವ ಕಡೆಗೆ ಇಲ್ಲವೇ ಬಲವಾದ ಕಾರಣ ಇದ್ದರೆ ಮಾತ್ರ ನಿಯೋಜನೆ ಮಾಡಬಹುದು ಎಂಬ ನಿಯಮ ಇದೆ. ಆದರೆ ಇಲ್ಲಿ ಅಂತಹ ಯಾವುದೇ ನಿರ್ದಿಷ್ಟಕಾರಣ ಕಂಡುಬಂದಿಲ್ಲ. ಎಲ್ಲ ಕಾಲೇಜುಗಳಲ್ಲಿ ಉಪನ್ಯಾಸಕರು ಅಗತ್ಯವಿರುವಷ್ಟೆಇದ್ದಾರೆ. ಈ ಮಧ್ಯೆ ಕಾಯಂ ಉಪನ್ಯಾಸಕರನ್ನು ಬೇರೆ ಕಡೆಗೆ ನಿಯೋಜಿಸುವ ಜರೂರತ್ತು ಏನಿದೆ ಎಂಬ ಪ್ರಶ್ನೆಗೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಉತ್ತರ ಇಲ್ಲ.

ಈ ಬಗ್ಗೆ ‘ಕನ್ನಡಪ್ರಭ’ ನಿಯೋಜನೆಗೊಂಡ ಉಪನ್ಯಾಸಕರನ್ನು ಸಂಪರ್ಕಿಸಿದಾಗ, ಮನೆಯಲ್ಲಿ ಹೆತ್ತವರಿಗೆ ಹುಷಾರಿಲ್ಲ, ಹಾಗಾಗಿ ಊರ ಕಡೆಗೆ ನಿಯೋಜನೆ ತೆಗೆದುಕೊಂಡಿದ್ದೇವೆ ಎಂಬಿತ್ಯಾದಿ ವೈಯಕ್ತಿಕ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ನಿಯೋಜನೆಗೊಂಡ ಬಹುತೇಕ ಉಪನ್ಯಾಸಕರಿಂದ ಇಂತಹದ್ದೇ ಸಬೂಬುಗಳು ಕೇಳಿಬರುತ್ತಿವೆ. ಇವರೆಲ್ಲರಿಗೆ ವೇತನ ಇಲ್ಲಿ, ಕೆಲಸ ಮಾತ್ರ ಅಲ್ಲಿ ಎಂಬಂತಾಗಿದೆ. ಹೀಗೆ ಸ್ವಂತ ಊರಿಗೆ ಸಾಮೂಹಿಕವಾಗಿ ಹಾಗೂ ಅವ್ಯಾಹತವಾಗಿ ನಿಯೋಜನೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಶಿಕ್ಷಣ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಸಂಕಷ್ಟ

ಕಾಯಂಗೊಂಡ ಉಪನ್ಯಾಸಕರ ಬೇಕಾಬಿಟ್ಟಿನಿಯೋಜನೆಯಿಂದ ಅತಿಥಿ ಉಪನ್ಯಾಸಕರಿಗೆ ಸಂಕಷ್ಟತಲೆದೋರಿದೆ. ಈಗಾಗಲೇ ಪ್ರಥಮ ಹಂತದಲ್ಲಿ 140 ಹಾಗೂ ಎರಡನೇ ಹಂತದಲ್ಲಿ 162 ಮಂದಿ ನಿಯೋಜನೆಗೊಂಡಿದ್ದು, ಇವರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಬೇಕಾಗಿದೆ.

ಅದೇ ರೀತಿ ಹಾಲಿ ಕಾಲೇಜುಗಳಲ್ಲಿ ನಿಯೋಜನೆಯಿಂದ ಖಾಲಿಯಾಗುವ ಹುದ್ದೆಗೆ ಮತ್ತೆ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಬೇಕಾಗಿದೆ. ಆದರೆ ನಿಯೋಜನೆ ರದ್ದುಗೊಂಡು ಮತ್ತೆ ಈ ಕಾಯಂ ಉಪನ್ಯಾಸಕರು ಆಗಮಿಸಿದರೆ, ಆಗ ಇಲ್ಲಿ ನೇಮಕಗೊಂಡ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎರಡು ಕಡೆ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಯಾವುದೇ ಕ್ಷಣದಲ್ಲಿ ಕೆಲಸಕ್ಕೆ ಕುತ್ತುಬರುವ ಸಂಭವ ಇದ್ದೇ ಇದೆ.

ಕಾಲೇಜು ಶಿಕ್ಷಣ ಇಲಾಖೆಯಿಂದ ಆದೇಶ ಬಂದಿದೆ. ಆದರಂತೆ ಕಾಯಂ ಉಪನ್ಯಾಸಕರನ್ನು ನಿಯೋಜನೆಗೊಂಡ ಸ್ಥಳಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ. ಇಲ್ಲಿ ಪರ್ಯಾಯವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು.

-ಅಪ್ಪಾಜಿ ಗೌಡ, ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು