ನಿರೀಕ್ಷಿಸಿದ ಪ್ರಮಾಣದಲ್ಲಿ ದರ ಇಳಿಕೆಯಾಗದೇ ಹೋಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನವದೆಹಲಿ(ನ.12): ಹೋಟೆಲ್ ತಿಂಡಿ-ಊಟದ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಿದ ಬೆನ್ನಲ್ಲೇ, ಇವುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಬಹುದೆಂಬ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಇಂಥದ್ದೊಂದು ತೆರಿಗೆ ಇಳಿಕೆಯ ಲಾಭ ಪೂರ್ಣವಾಗಿ ಸಿಗದೇ ಹೋಗಬಹುದು.

ನಿರೀಕ್ಷಿಸಿದ ಪ್ರಮಾಣದಲ್ಲಿ ದರ ಇಳಿಕೆಯಾಗದೇ ಹೋಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಹೀಗೇನಾದರೂ ಆಗಿದ್ದೇ ಆದಲ್ಲಿ, ತಿಂಡಿ- ಊಟದ ಜಿಎಸ್‌ಟಿ ತೆರಿಗೆ ಪ್ರಮಾಣ ಇಳಿಸಿದ ಸರ್ಕಾರದ ಉದ್ದೇಶವೇ ವಿಫಲವಾಗಿದೆ. ಜೊತೆಗೆ ಹೋಟೆಲ್ ಗ್ರಾಹಕರು ಮತ್ತೊಮ್ಮೆ ವಂಚನೆಗೊಳಗಾಗುವುದು ಖಚಿತ ಎನ್ನಲಾಗಿದೆ.

ಸಿಗುತ್ತಾ ಲಾಭ?

ಈವರೆಗೆ ಶೇ.28,ಶೇ.18ರ ದರದಲ್ಲಿ ತಿಂಡಿ-ಊಟದ ಮೇಲೆ ಜಿಎಸ್‌ಟಿಯನ್ನು ಹೋಟೆಲ್ ಮಾಲೀಕರು ಗ್ರಾಹಕರ ಮೇಲೆ ವಿಧಿಸುತ್ತಿದ್ದರು. ಆದರೆ ಗ್ರಾಹಕರಿಂದ ವಸೂಲಿ ಮಾಡಿದ ಅಷ್ಟೂ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಿರಲಿಲ್ಲ. ತಾವು ತಿಂಡಿ-ಊಟ ತಯಾರಿಸಲು ಬಳಸುವ ಪದಾರ್ಥಗಳನ್ನು ಖರೀದಿಸಲು ಪಾವತಿಸಿದ್ದ ತೆರಿಗೆಯನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ರೂಪದಲ್ಲಿ ಹಿಂದಕ್ಕೆ ಪಡೆಯುತ್ತಿದ್ದರು. ಹೋಟೆಲ್‌ಗಳಿಗೆ ನೀಡಿದ್ದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ ಲಾಭವನ್ನು ಅವು ಗ್ರಾಹಕರಿಗೆ ವರ್ಗಾಯಿಸಬೇಕಿತ್ತು. ಆದರೆ ಅವು ಹಾಗೆ ಮಾಡುತ್ತಿರಲಿಲ್ಲ ಹೀಗಾಗಿ ಇದೀಗ ತೆರಿಗೆ ಸ್ತರ ಇಳಿಸುವ ಜೊತೆಗೆ, ಹೋಟೆಲ್‌ಗಳಿಗೆ ನೀಡುತ್ತಿದ್ದ ‘ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್’ ಸೌಲಭ್ಯವನ್ನು ಸರ್ಕಾರ ತೆಗೆದುಹಾಕಿದೆ. ಇದರ ಜತೆಗೆ ಜಿಎಸ್‌ಟಿ ದರವನ್ನು ಎ.ಸಿ ಮತ್ತು ನಾನ್ ಎ.ಸಿ.ಗೆ ಶೇ.5ಕ್ಕೆ ಸಮಾನವಾಗಿ ನಿಗದಿಪಡಿಸಿದೆ. ಹೀಗಾಗಿ ಇನ್ನು ಕಡ್ಡಾಯವಾಗಿ ಹೋಟೆಲ್ ಮಾಲೀಕರು ಶೇ.5ರಷ್ಟು ಜಿಎಸ್‌ಟಿಯನ್ನು ಸರ್ಕಾರಕ್ಕೆ ಕಟ್ಟಲೇಬೇಕು.

‘ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್’ ಹೆಸರಿನಲ್ಲಿ ಅವರಿಗೆ ಶೇ.5 ಜಿಎಸ್‌ಟಿ ಕಟ್ಟುವಾಗ ಯಾವುದೇ ತೆರಿಗೆ ವಿನಾಯ್ತಿ ಸಿಗದು. ಹೀಗಾಗಿ ಹೋಟೆಲ್ ಮಾಲೀಕರು, ‘ಇನ್‌ಪುಟ್ ಕ್ರೆಡಿಟ್ ತೆರಿಗೆ’ಯಿಂದ ಸಿಗದ ಪ್ರಯೋಜನವನ್ನು ಸರಿದೂಗಿಸಿ
ಕೊಳ್ಳಲು ತಿಂಡಿ-ಊಟದ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸುವ ಅಥವಾ ಏರಿಸುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಹೋಟೆಲ್ ಅಸೋಸಿಯೇಶನ್, ‘ಇನ್‌ಪುಟ್ ಕ್ರೆಡಿಟ್ ತೆರಿಗೆ ಸೌಲಭ್ಯವನ್ನು ತೆಗೆದು ಹಾಕಬಾರದು. ಜತೆಗೆ ಜಿಎಸ್‌ಟಿ ದರವನ್ನೂ ಇಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು.
ಆದರೆ ಸರ್ಕಾರ ಜಿಎಸ್‌ಟಿ ದರ ಇಳಿಸುವ ಜತೆಗೆ ಇನ್‌ಪುಟ್ ಕ್ರೆಡಿಟ್ ಸವಲತ್ತು ತೆಗೆದುಹಾಕಿದೆ. ನಮ್ಮ ಒಂದು ಬೇಡಿಕೆ ಮಾತ್ರ ಈಡೇರಿದಂತಾಗಿದೆ. ಇನ್ನೊಂದು ಸವಲತ್ತಿಗೆ ಕತ್ತರಿ ಬಿದ್ದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಮೂಲಕ
ತಿಂಡಿ-ಊಟದ ದರ ಇಳಿಯದೇ ಹೋಗಬಹುದು ಎಂಬ ಪರೋಕ್ಷ ಸೂಚನೆಯನ್ನು ನೀಡಿದೆ.