ಮುಂದೂಡುವಂತೆ ಒತ್ತಡ ಇದ್ದರೂ ಜುಲೈ 1ರಿಂದಲೇ ಸರಕು ಹಾಗೂ ಸೇವಾ ತೆರಿಗೆ (ಜಿ ಎಸ್‌ಟಿ) ಜಾರಿ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಭಾನುವಾರ ಇನ್ನಷ್ಟು ವಸ್ತು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣ ನಿರ್ಧರಿಸಿದೆ. ಈ ವೇಳೆ ಹೋಟೆಲ್‌ಗಳಿಗೆ ತುಸು ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲಾಗಿದೆ.

ನವದೆಹಲಿ: ಮುಂದೂಡುವಂತೆ ಒತ್ತಡ ಇದ್ದರೂ ಜುಲೈ 1ರಿಂದಲೇ ಸರಕು ಹಾಗೂ ಸೇವಾ ತೆರಿಗೆ (ಜಿ ಎಸ್‌ಟಿ) ಜಾರಿ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಭಾನುವಾರ ಇನ್ನಷ್ಟು ವಸ್ತು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣ ನಿರ್ಧರಿಸಿದೆ. ಈ ವೇಳೆ ಹೋಟೆಲ್‌ಗಳಿಗೆ ತುಸು ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲಾಗಿದೆ.

ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 17ನೇ ಸಭೆಯಲ್ಲಿ ಹವಾನಿಯಂತ್ರಿತ (ಎ.ಸಿ.) ಹೋಟೆಲ್‌ಗಳು ಹಾಗೂ ಲಾಟರಿ ಟಿಕೆಟ್‌ ಮೇಲಿನ ತೆರಿಗೆ ದರಗಳನ್ನು ನಿರ್ಧರಿಸಲಾಯಿತು. ಈ ಮುಂಚೆ 5 ಸಾವಿರ ರು.ಗಿಂತ ಹೆಚ್ಚಿನ ಎಸಿ ಹೋಟೆಲ್‌ ಸೇವೆಗೆ ಶೇ.28ರಷ್ಟುತೆರಿಗೆ ದರ ವಿಧಿಸಲು ಇದ್ದ ಪ್ರಸ್ತಾಪವನ್ನು ಸಡಿಲಿಸಲು ಸಭೆ ನಿರ್ಧರಿಸಿತು. ‘2500 ರು.ನಿ.ದ 7500 ರು.ವರೆಗಿನ ಎ.ಸಿ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಸೇವೆಗೆ ಶೇ.18 ಜಿಎಸ್‌ಟಿ ದರ ಅನ್ವಯವಾಗಲಿದೆ. 7500 ರು. ಮೇಲ್ಪಟ್ಟಎ.ಸಿ. ಹೋಟೆಲ್‌/ರೆಸ್ಟೋರೆಂಟ್‌ಗಳಿಗೆ ಶೇ.28ರಷ್ಟು ಜಿಎಸ್‌ಟಿ ದರ ಬೀಳಲಿದೆ' ಎಂದು ಸಭೆಯ ಬಳಿಕ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ, ರಾಜ್ಯ ಸರ್ಕಾರಗಳು ನಡೆಸುವ ಲಾಟರಿಗಳಿಗೆ ಶೇ.12ರಷ್ಟುಮತ್ತು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ನಡೆಯುವ ಖಾಸಗಿ ಲಾಟರಿಗಳಿಗೆ ಶೇ.28ರಷ್ಟುತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿತು.

ಜಿಎಸ್‌ಟಿ ಮುಂದೂಡಿಕೆ ಇಲ್ಲ: ಇದೇ ವೇಳೆ ಜಿಎಸ್‌ಟಿ ಜಾರಿಯನ್ನು ಮುಂದೂಡಬೇಕು ಎಂಬ ಬೇಡಿಕೆಗೆ ಉತ್ತರಿಸಿದ ಜೇಟ್ಲಿ, ಜಿಎಸ್‌ಟಿ ನಿಗದಿಯಂತೆಯೇ ಜಾರಿ​ಯಾ​ಗಲಿದೆ. ಜೂ.30ರ ಮಧ್ಯರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಅನ್ವಯವಾಗಲಿದೆ. ಜುಲೈ 1ರಂದು ಜಿಎಸ್‌ಟಿ ಜಾರಿ ಕಾರ್ಯಕ್ರಮ ಆಯೋಜಿಸಲಾ​ಗುವುದು. ಜಿಎಸ್‌ಟಿ ಜಾರಿಯನ್ನು ಮುಂದೂಡಲು ನಮಗೆ ಬೇಕಾದಷ್ಟುಸಮಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹೋಟೆಲ್‌ ಜಿಎಸ್‌ಟಿ ಕಡಿತ: ಮಾಲೀಕರ ಸ್ವಾಗತ
ಬೆಂಗಳೂರು: ಹೋಟೆಲ್‌ಗಳ ಮೇಲಿನ ಜಿಎಸ್‌ಟಿ (ಏಕರೂಪ ತೆರಿಗೆ) ತೆರಿಗೆ ಕಡಿಮೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಹೋಟೆಲ್‌ ಮಾಲೀಕರ ಸಂಘ ಸ್ವಾಗತಿಸಿದೆ. ಈ ಮೊದಲು 5 ಸಾವಿರ ಮೇಲಿನ ವಹಿವಾಟಿಗೆ ಶೇ.28 ಜಿಎಸ್‌ಟಿ ತೆರಿಗೆ ವಿಧಿಸಲಾಗಿತ್ತು. ಇದರಿಂದ ಮಧ್ಯಮ ವರ್ಗದ ಹೋಟೆಲ್‌ಗಳಿಗೆ ಭಾರಿ ಹೊಡೆತ ಬೀಳುತಿತ್ತು. ಇದರ ವಿರುದ್ಧ ಒಂದು ದಿನದ ಮುಷ್ಕರ ಮಾಡಿ, ತೆರಿಗೆ ಇಳಿಸುವಂತೆ ಮನವಿ ಮಾಡಲಾಗಿತ್ತು. ಇದೀಗ 7500ರ ಮೇಲಿನ ವಹಿವಾಟಿಗೆ ಶೇ.28ರಷ್ಟುತೆರಿಗೆ ನಿಗದಿಗೊಳಿಸಲಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ಕ್ರಮದಿಂದ ಮಧ್ಯದ ವರ್ಗದ ಹೋಟೆಲ್‌ಗಳಿಗೆ ಅನಕೂಲವಾಗಲಿದೆ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಎಂ.ರಾಜೇಂದ್ರ ಹೇಳಿದರು. ಅದೇ ರೀತಿ ರೆಸ್ಟೋರೆಂಟ್‌ಗಳ ಮೇಲಿನ ಶೇ.12ರಷ್ಟುತೆರಿಗೆಯನ್ನು ಕಡಿಮೆ ಮಾಡಬೇಕುಎಂದು ಅವರು ಮನವಿ ಮಾಡಿದರು.