ಸಾಲಮನ್ನಾದ ನಂತರ ಮತ್ತೊಂದು ಮಹತ್ವದ ಮನ್ನಾ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಆರಂಭಿಸಿದೆ. ವಸತಿ ಇಲಾಖೆ ವ್ಯಾಪ್ತಿಯ ವಿವಿಧ ಆಶ್ರಯ ಮನೆಗಳ ಯೋಜನೆಯಲ್ಲಿ ವಸೂಲಾಗದ ಬಾಕಿ ಮೊತ್ತವನ್ನು ಹಂತ ಹಂತವಾಗಿ ಮನ್ನಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಬೆಂಗಳೂರು: ಸಾಲಮನ್ನಾದ ನಂತರ ಮತ್ತೊಂದು ಮಹತ್ವದ ಮನ್ನಾ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಆರಂಭಿಸಿದೆ. ವಸತಿ ಇಲಾಖೆ ವ್ಯಾಪ್ತಿಯ ವಿವಿಧ ಆಶ್ರಯ ಮನೆಗಳ ಯೋಜನೆಯಲ್ಲಿ ವಸೂಲಾಗದ ಬಾಕಿ ಮೊತ್ತವನ್ನು ಹಂತ ಹಂತವಾಗಿ ಮನ್ನಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆಶ್ರಯ ಮತ್ತು ಜನತಾ ಮನೆಗಳ ಫಲಾನುಭವಿಗಳು ಹಾಗೂ ಇತ್ತೀಚೆಗೆ ಬಸವ ವಸತಿ, ಅಂಬೇಡ್ಕರ್ ವಸತಿ ಮತ್ತು ನಗರ ಪ್ರದೇಶಗಳ ವಾಜಪೇಯಿ ಆವಾಸ್ ಯೋಜನೆಗಳ ಫಲಾನುಭವಿಗಳೂ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯದ ಫಲಾನುಭವಿಗಳ ಬಾಕಿ ಮತ್ತು ಬಡ್ಡಿ ಸೇರಿ ಸುಮಾರು ₹2480 ಕೋಟಿ ಹಣ ವಸೂಲಾಗಿಲ್ಲ. ಈ ಮೊತ್ತವನ್ನು ಹಂತ ಹಂತವಾಗಿ ಮನ್ನಾ ಮಾಡಲು ಸರ್ಕಾರ ಯೋಜಿಸಿದೆ. ಈ ದಿಸೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಹಲವು ಕಡೆಗಳಲ್ಲಿ ಸಾಲ ತೀರುವಳಿ ಪತ್ರಗಳ ಹಂಚಿಕೆ ಮಾಡಲಾಗಿದೆ ಎಂದು ವಸತಿ ಇಲಾಖೆಯ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ ಧಾರವಾಡ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದು, ಉಡುಪಿ ಮತ್ತು ಯಾದಗಿರಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಫಲಾನುಭವಿಗಳಿದ್ದಾರೆ.

ದಶಕದ ಸುಸ್ತಿದಾರರಿಗೆ ಮುಕ್ತಿ: ರಾಜೀವ್ ಗಾಂಧಿ ವಸತಿ ನಿಗಮದ ಜನತಾ ಮನೆ ಮತ್ತು ಆಶ್ರಯ ಮನೆಗಳ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಶೇ.50ರಷ್ಟು ಸಾಲ ಮತ್ತು ಶೇ.50ರಷ್ಟು ಸಹಾಯ ಧನ ನೀಡಲಾಗುತ್ತದೆ. ಹೀಗಾಗಿ ರಾಜ್ಯದಲ್ಲಿ 1995ರಿಂದ 2008ರ ವರೆಗೂ 10.84 ಲಕ್ಷ ಫಲಾನುಭವಿಗಳು ವಿವಿಧ ರೀತಿಯ ಆಶ್ರಯ ಮನೆಗಳನ್ನು ಪಡೆದಿದ್ದರು. ಇದರಲ್ಲಿ ಫಲಾನುಭವಿಗಳು ಸಹಾಯಧನ ಹೊರತುಪಡಿಸಿ ಸಾಲದ ಮೊತ್ತವನ್ನು ಸರ್ಕಾರಕ್ಕೆ ಮರು ಪಾವತಿಸಬೇಕಿತ್ತು. ಹೀಗೆ ಮರು ಪಾವತಿಸಬೇಕಾದ ಮೊತ್ತ ಸುಮಾರು ₹1480 ಕೋಟಿಯಾಗಿತ್ತು. ಇದರ ಮೇಲಿನ ಬಡ್ಡಿ 1995ರಿಂದ ಸುಮಾರು ₹1000 ಕೋಟಿವರೆಗೂ ಏರಿಕೆಯಾಗಿತ್ತು.

ಇದರೊಂದಿಗೆ ಸಾಲ ಮತ್ತು ಬಡ್ಡಿ ಎರಡೂ ಸೇರಿ ಸುಮಾರು ₹2480 ಕೋಟಿ ಫಲಾನುಭವಿಗಳ ತಲೆ ಮೇಲಿತ್ತು. ಇದರಿಂದ ಆಶ್ರಯ ಮನೆ ಪಡೆದವರು ಸಾಲ ಮರುಪಾವತಿಸುವವರೆಗೂ ಅವರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿರಲಿಲ್ಲ. ಮನೆ ದಾಖಲೆಗಳಲ್ಲಿ ಸಾಲ ಎಂದು ದಾಖಲಿಸಿದ್ದರಿಂದ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳೂ ಲಭಿಸುತ್ತಿರಲಿಲ್ಲ. ಆದ್ದರಿಂದ ಸಾಲ ಮತ್ತು ಬಡ್ಡಿ ಮೊತ್ತವನ್ನು ಮನ್ನಾ ಮಾಡಬೇಕು, ಸಾಲ ತೀರುವಳಿ ಎಂದು ದಾಖಲಿಸಿ ಹಕ್ಕುಪತ್ರಗಳನ್ನು ನೀಡಿ ಮನೆ ಮಾಲೀಕತ್ವ ನೀಡಬೇಕೆಂದು ಫಲಾನುಭವಿಗಳು ಒತ್ತಾಯ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈಗ ಎಲ್ಲಾ ಫಲಾನುಭವಿಗಳ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಈಗಾಗಲೇ 8 ಲಕ್ಷಕ್ಕೂ ಹೆಚ್ಚಿನ ಮಂದಿಯ ಸಾಲ ತೀರುವಳಿ ಪತ್ರಗಳನ್ನು (ಆಶ್ರಯ ಮನೆಗಳ ಹಕ್ಕುಪತ್ರ) ಸಿದ್ಧಪಡಿಸಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಹಂಚಿಕೆ ಮಾಡಲು ನಿರ್ಧರಿಸಿದೆ. ಸಾಧ್ಯವಾದಷ್ಟು ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಸ್ಥಳೀಯ ನಾಯಕರ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಿ ಜನಪ್ರಿಯತೆ ಗಿಟ್ಟಿಸುವುದಕ್ಕೂ ತಯಾರಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.