ಕಾರವಾರ :  ಕಳೆದ 10 ವರ್ಷಗಳಿಂದ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿದ್ದ ಗೋಕರ್ಣ ಮಹಾಬಲೇಶ್ವರ ದೇವಾಲಯ ಹೈಕೋರ್ಟ್‌ ಆದೇಶದ ಹಿನ್ನೆಲೆ ಬಹುತೇಕ ಆ.23ರಂದು ಸರ್ಕಾರದ ಸುಪರ್ದಿಗೆ ಬರಲಿದೆ.

ಆ.10ರಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪು ನೀಡಿ, ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿದ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಸೆ.10ರಿಂದ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುವ ಸಮಿತಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸೂಚಿಸಿತ್ತು.

ಹೈಕೋರ್ಟ್‌ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಕ್ರಮ ಕೈಗೊಂಡಿದ್ದು, ಸೋಮವಾರ ಕುಮಟಾ ಉಪ ವಿಭಾಗಾಧಿಕಾರಿ ಗೋಕರ್ಣಕ್ಕೆ ತೆರಳಿ ದೇವಾಲಯದ ಆಸ್ತಿಯನ್ನು ಪರಿಶೀಲನೆ ಮಾಡಿದ್ದಾರೆ. ದೇವಾಲಯದ ಸ್ಥಿರಾಸ್ತಿ, ಚರಾಸ್ತಿ ಹಾಗೂ ಬ್ಯಾಂಕ್‌ ಖಾತೆಯ ದಾಖಲೆಗಳನ್ನು ಪರಿಶೋಧನೆ ಮಾಡಿದ್ದಾರೆ. ದೇವಾಲಯವನ್ನು ಸರ್ಕಾರ ಮಠಕ್ಕೆ ಕೊಡುವಾಗ ಇದ್ದ ಆಸ್ತಿ, ದಾಖಲೆಗಳನ್ನು ಸಹ ಪರಿಶೀಲಿಸಿ, ಈಗ ಆ ಎಲ್ಲ ದಾಖಲೆ, ಆಸ್ತಿಗಳ ಪರಿಶೀಲನೆಯನ್ನು ನಡೆಸಿದ್ದಾರೆ.

ಹೈಕೋರ್ಟ್‌ ಆದೇಶದಂತೆ ಮೇಲ್ವಿಚಾರಣಾ ಸಮಿತಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕುಮಟಾ ಉಪ ವಿಭಾಗಾಧಿಕಾರಿ, ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳು ಅಥವಾ ವಿದ್ವಾಂಸರು ಹಾಗೂ ಗೋಕರ್ಣ ದೇವಾಲಯದ ಇಬ್ಬರು ಉಪಾಧಿವಂತರನ್ನು ಸದಸ್ಯರನ್ನಾಗಿ ನೇಮಿಸಬೇಕಾಗಿದೆ.

ಪ್ರತಿಷ್ಠಿತ ವ್ಯಕ್ತಿಗಳು ಅಥವಾ ವಿದ್ವಾಂಸರು, ಉಪಾಧಿವಂತರನ್ನು ಜಿಲ್ಲಾಧಿಕಾರಿ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ನಾಮಕರಣ ಮಾಡಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ನಾಲ್ವರ ಹೆಸರುಗಳನ್ನು ಶಿಫಾರಸು ಮಾಡಲಿದ್ದಾರೆ. ಗೋಕರ್ಣ ದೇವಾಲಯಕ್ಕೆ ಸಂಬಂಧಿಸಿದ ಸ್ಥಿರಾಸ್ತಿ, ಚರಾಸ್ತಿ ಮ್ತತು ಬ್ಯಾಂಕ್‌ ಖಾತೆಯ ದಾಖಲೆಗಳನ್ನು ಪರಿಶೋಧನೆ ನಡೆಸಿ ಎರಡು ವಾರದೊಳಗೆ ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆ ಪರಿಶೋಧನೆ ನಡೆಯುತ್ತಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಅಂದರೆ 2008, ಆ.12ರಂದು ಮುಜರಾಯಿ ಇಲಾಖೆಯ ಪಟ್ಟಿಯಲ್ಲಿದ್ದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಈ ಕ್ರಮವನ್ನು ರದ್ದುಪಡಿಸುವಂತೆ ಮಹಾಬಲೇಶ್ವರ ದೇವರು ಟ್ರಸ್ಟ್‌ ಮತ್ತು ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ 2008ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.


ಹೈಕೋರ್ಟ್‌ ಆದೇಶದ ಹಿನ್ನೆಲೆ ಕ್ರಮ ಕೈಗೊಂಡಿದ್ದೇನೆ. ಸೋಮವಾರ ಉಪ ವಿಭಾಗಾಧಿಕಾರಿ ದೇವಾಲಯದ ಆಸ್ತಿಯನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯದಲ್ಲೆ ದೇವಾಲಯವನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗುವುದು.

-ಎಸ್‌.ಎಸ್‌.ನಕುಲ್‌, ಉತ್ತರ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿ