Asianet Suvarna News Asianet Suvarna News

ಆರತಿ ತಟ್ಟೆ ಕಾಸು ಅರ್ಚಕರಿಗಿಲ್ಲ?

ಆರತಿ ತಟ್ಟೆಕಾಸು ಅರ್ಚಕರಿಗಿಲ್ಲ? ಸರ್ಕಾರದಿಂದ ನಿಯಮ ಬದಲು: ಆರೋಪ | 

Govt to revise pay of Muzrai temple Priest
Author
Bengaluru, First Published Jun 28, 2019, 8:55 AM IST

ಬೆಂಗಳೂರು (ಜೂ. 28):  ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಅರ್ಚಕರ ವೇತನ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರವು ಇದೇ ವೇಳೆ ಭಕ್ತರು ಮಂಗಳಾರತಿಗೆ ಹಾಕುವ ಕಾಣಿಕೆಗಳನ್ನು ಅರ್ಚಕರು ಸ್ವೀಕರಿಸುವಂತಿಲ್ಲ ಎಂಬ ನಿಯಮ ರೂಪಿಸಿದ್ದು, ಇದು ಕಾರ್ಯಸಾಧುವಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿರುವ 34,508 ದೇವಾಲಯಗಳ ಪೈಕಿ ಸರ್ಕಾರ ನಿಗದಿ ಮಾಡಿರುವ ವೇತನ ಪಡೆಯುತ್ತಿರುವ 3,508 ಮಂದಿ ಅರ್ಚಕರು ಹಾಗೂ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ನಿರ್ಣಯ ತೆಗೆದುಕೊಂಡಿದೆ.

ಈ ಪರಿಷ್ಕರಣೆಗೆ ಪೂರಕವಾಗಿ ಕೆಲವೊಂದು ನಿಯಮಗಳನ್ನು ರಚಿಸಲಾಗಿದ್ದು, ಈ ಪೈಕಿ ದೇವಾಲಯಕ್ಕೆ ಬರುವ ಭಕ್ತಾದಿಗಳು ಮಂಗಳಾರತಿ ತಟ್ಟೆಯಲ್ಲಿ ಹಾಕುವ ಕಾಣಿಕೆಯನ್ನು ಅರ್ಚಕರು ಸ್ವೀಕರಿಸಬಾರದು ಎಂಬ ನಿಯಮವೂ ಒಂದು ಎಂದು ರಾಜ್ಯ ಅರ್ಚಕರ ಸಂಘದ ಪದಾಧಿಕಾರಿಗಳು ಆರೋಪಿಸುತ್ತಾರೆ.

ಭಕ್ತಾದಿಗಳು ಪ್ರೀತಿಯಿಂದ ಹಾಕುವ ಕಾಣಿಕೆಗೆ ನಿರ್ಬಂಧ ಹೇರುವ ಮೂಲಕ ಭಕ್ತಾದಿಗಳು ಹಾಗೂ ಅರ್ಚಕರ ನಡುವಿನ ಸಂಬಂಧವನ್ನು ಅಪವಿತ್ರ ಮಾಡಲು ಹೋಗಬಾರದು ಎಂದು ಒತ್ತಾಯಿಸಿದ್ದಾರೆ.

ಆದರೆ, ಇಂತಹದೊಂದು ನಿಯಮವಿರುವ ಕುರಿತು ಅಧಿಕಾರಿಗಳು ಸ್ಪಷ್ಟಉತ್ತರ ನೀಡುತ್ತಿಲ್ಲ. ಇನ್ನು ಅರ್ಚಕರ ಸಂಘದ ಪದಾಧಿಕಾರಿಗಳು ಸಹ ಇಂತಹದೊಂದು ನಿಯಮ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ, ಒಂದು ವೇಳೆ ಇಂತಹ ನಿಯಮ ರೂಪಿಸಿದ್ದರೆ ಅದು ಸ್ವೀಕಾರಾರ್ಹವಲ್ಲ ಎಂದು ಹೇಳುತ್ತಾರೆ.

ಕನ್ನಡಪ್ರಭದೊಂದಿಗೆ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾದ ಸೋಮಸುಂದರ ದೀಕ್ಷಿತ್‌ ಅವರು ಮಾತನಾಡಿ, ಇಂತಹ ನಿಯಮ ರೂಪಿಸಿರುವುದು ಗಮನಕ್ಕೆ ಬಂದಿಲ್ಲ. ಶುಕ್ರವಾರ ಕಚೇರಿಗೆ ಹೋಗಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಅರ್ಚಕರಿಗೆ ಕಡಿಮೆ ವೇತನ ಇರುವುದರಿಂದ ಪರಿಷ್ಕರಿಸಿ ನ್ಯಾಯ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದ್ದೆವು. ಇದೀಗ ಇಂತಹ ಬೆಳವಣಿಗೆ ಆಗಿದ್ದರೆ ಅದು ಸ್ವೀಕಾರಕ್ಕೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟರು.

‘ನಾನು ಅರ್ಚಕರ ವೇತನ ಪರಿಷ್ಕರಣೆ ಸಮಿತಿಯಲ್ಲಿದ್ದೇನೆ. ಮಂಗಳಾರತಿ ಕಾಣಿಕೆಗಳ ಬಗ್ಗೆ ಒಂದು ಅಕ್ಷರವನ್ನೂ ನಾವು ನಿಯಮಾವಳಿಯಲ್ಲಿ ಸೇರಿಸಿಲ್ಲ. ನಮ್ಮ ಆದೇಶ ಪ್ರತಿಯಲ್ಲಿ ಅಂತಹ ಯಾವುದೇ ಸೂಕ್ಷ್ಮ ವಿಚಾರಗಳನ್ನು ಮುಟ್ಟಲೂ ಹೋಗಿಲ್ಲ’ ಎಂದು ಸಮಿತಿಯ ಸದಸ್ಯರೂ ಆದ ಮುಜರಾಯಿ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios