ರಾಜ್ಯದ ಪ್ರತಿ ತಾಲೂಕಿನ ಐದು ಸಾವಿರ ಕುಟುಂಬಗಳಿಗೆ ಗಿರಿರಾಜ ಹಾಗೂ ನಾಟಿ ತಳಿಯ ಕೋಳಿಗಳನ್ನು ವಿತರಿಸುವ ಮೂಲಕ ಆ ಕುಟುಂಬಗಳನ್ನು ಆರ್ಥಿಕ ಸಬಲರನ್ನಾಗಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ.ಮಂಜು ಹೇಳಿದ್ದಾರೆ.
ಧಾರವಾಡ: ರಾಜ್ಯದ ಪ್ರತಿ ತಾಲೂಕಿನ ಐದು ಸಾವಿರ ಕುಟುಂಬಗಳಿಗೆ ಗಿರಿರಾಜ ಹಾಗೂ ನಾಟಿ ತಳಿಯ ಕೋಳಿಗಳನ್ನು ವಿತರಿಸುವ ಮೂಲಕ ಆ ಕುಟುಂಬಗಳನ್ನು ಆರ್ಥಿಕ ಸಬಲರನ್ನಾಗಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ.ಮಂಜು ಹೇಳಿದ್ದಾರೆ.
ರಾಯಾಪುರ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರದಲ್ಲಿ ಭಾನುವಾರ ₹93 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕುಕ್ಕುಟ ಸಾಕಣೆ ತರಬೇತಿ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಬರಗಾಲ, ಕೃಷಿ ಕಾರ್ಮಿಕರ ಕೊರತೆ, ಮತ್ತಿತರೆ ಕಾರಣಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಳಿ, ಕುರಿ, ಜಾನುವಾರು ಸಾಕಣೆ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ. ಈಗಾಗಲೇ ಭೂ ಸಮೃದ್ಧಿ ಗ್ರಾಮ, ಪಶು ಭಾಗ್ಯದ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಅದೇ ರೀತಿ ತಾಲೂಕಿನ ಆಯ್ದ 5 ಸಾವಿರ ಕುಟುಂಬಗಳಿಗೆ ಕೋಳಿಗಳನ್ನು ನೀಡಲಾಗುವುದು.
ತಮ್ಮ ಹಿತ್ತಲುಗಳಲ್ಲೇ ಅವುಗಳನ್ನು ಸಾಕಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಕೆಲವೆಡೆ ರೈತರು ಕಷ್ಟಪಟ್ಟು ಕೋಳಿ ಸಾಕಿದರೆ ಖಾಸಗಿ ಕಂಪನಿಯವರು ಅವರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೆಲ ನಿಯಮಗಳನ್ನು ರೂಪಿಸಲಾಗುವುದು ಎಂದರು.
