ನೀವು ವಾಹನಗಳನ್ನು ಕೊಳ್ಳಲು ನಿರ್ಧರಿಸಿದ್ದೀರಾ..? ಹಾಗಾದರೆ ಇಲ್ಲೊಮ್ಮೆ ನೀವು ಗಮನಿಸುವುದು ಒಳ್ಳೆಯದು.
ನವದೆಹಲಿ(ಡಿ.4): ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ, 2020ರ ಏ.1ಕ್ಕೂ ಮುನ್ನ ತಯಾರಾದ ಯಾವುದೇ ಬಿಎಸ್-4 ಇಂಜಿನ್ ವಾಹನಗಳ ನೋಂದಣಿಯನ್ನು 2020ರ ಜೂ.30 ನಂತರ ಮಾಡಿಕೊಳ್ಳದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದಕ್ಕೆ ಅಗತ್ಯವಾಗುವಂತೆ ಕೇಂದ್ರೀಯ ವಾಹನಗಳ ನಿಯಮಗಳ ತಿದ್ದುಪಡಿ ಮಸೂದೆ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ತಕರಾರು ಮತ್ತು ಸಲಹೆಗಳಿದ್ದರೆ ಡಿ.20ರೊಳಗೆ ತಿಳಿಸುವಂತೆ ಸಾರ್ವಜನಿಕರನ್ನು ಕೇಂದ್ರ ಹೆದ್ದಾರಿ ಸಚಿವಾಲಯ ಕೋರಿದೆ. 2020 ಏ.1ರಿಂದ ಬಿಎಸ್-4 ಇಂಜಿನ್’ಗಳನ್ನು ಬಿಎಸ್-6ಕ್ಕೆ ಬದಲಾವಣೆ ಮಾಡುವ ಬಗ್ಗೆ ಕಳೆದ ವರ್ಷ ಸರ್ಕಾರ ನಿರ್ಧರಿಸಿದೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಧಿಕ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಅಲ್ಲದೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡಲೂ ಕೂಡ ಕಷ್ಟ ಪಡಬೇಕಾದ ಸ್ಥಿತಿ ಗತಿ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಕೊಂಚ ಮಟ್ಟಿಗಾದರೂ ತಗ್ಗಿಸಬೇಕಾದ ಹಿನ್ನೆಲೆಯಲ್ಲಿ ಸರ್ಕಾರವೂ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
