ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಶಪಥದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದು ನಾಲ್ಕು ವರ್ಷ. ನಾಲ್ಕು ವರ್ಷದ ಅವಧಿಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಆಗಾಗ ಟೀಕೆಗಳು ಕೇಳಿ ಬಂದಿವೆ. ಸಚಿವರು ವಿಧಾನಸೌಧಕ್ಕೆ ಮಾತ್ರ ಸೀಮಿತವಾಗುತ್ತಾರೆ ಎಂಬ ಕೂಗಿನ ಮಧ್ಯೆ ಒಂದಿಷ್ಟು ಮಂದಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ.

ಬೆಂಗಳೂರು(ಮೇ.13): ಭಿನ್ನಮತ, ಮುಜುಗರ ಎಲ್ಲವನ್ನೂ ನಿಭಾಯಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಮಧ್ಯೆ ಕೆಲವು ಸಚಿವರುಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅಭಿಪ್ರಾಯ ಮೂಡಲು ನೆರವಾಗಿದ್ದಾರೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಶಪಥದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದು ನಾಲ್ಕು ವರ್ಷ. ನಾಲ್ಕು ವರ್ಷದ ಅವಧಿಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಆಗಾಗ ಟೀಕೆಗಳು ಕೇಳಿ ಬಂದಿವೆ. ಸಚಿವರು ವಿಧಾನಸೌಧಕ್ಕೆ ಮಾತ್ರ ಸೀಮಿತವಾಗುತ್ತಾರೆ ಎಂಬ ಕೂಗಿನ ಮಧ್ಯೆ ಒಂದಿಷ್ಟು ಮಂದಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ.

ವಿಧಾನಸಭಾ ಸ್ಪೀಕರ್​ ಆಗಿದ್ದು ಸಾಕಷ್ಟು ಕಸರತ್ತಿನ ಬಳಿಕ ಸಿದ್ದರಾಮಯ್ಯ ಸಂಪುಟ ಸೇರಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಇರುವ ಸಚಿವರ ಪೈಕಿ ಉತ್ತಮ ಎನ್ನಿಸಿಕೊಂಡಿದ್ದಾರೆ. ತಮ್ಮ ನೇರ ಹಾಗೂ ಖಡಕ್ ಮಾತಿನಿಂದ ಜಡ್ಡುಗಟ್ಟಿದ್ದ ಕಂದಾಯ ಇಲಾಖೆಯ ಅಧಿಕಾರಿಗಳನ್ನ ನಿದ್ದೆಯಿಂದ ಬಡಿದೆಬ್ಬಿಸಿದ್ದಾರೆ. ಬಗರ್​ ಹುಕುಂ ವಿಚಾರದಲ್ಲಿ ಕಾಗೋಡು ಕಳಕಳಿ ಮೆಚ್ಚುವಂತಹದ್ದೇ. ಜಿಲ್ಲಾ ಪ್ರವಾಸ ನಡೆಸಿ ಸ್ಥಳೀಯ ಮಟ್ಟದಲ್ಲೂ ಕೆಲಸ ನಡೆಯುವಂತೆ ಮಾಡಿದ್ದಾರೆ.

ಹಿರಿಯ ಸಚಿವ ಎಚ್​. ಕೆ. ಪಾಟೀಲ್​ ಕೂಡ ಒಂದಷ್ಟು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಕೆರೆ ಹೂಳೆತ್ತುವಿಕೆ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ವಿವಿ ಸ್ಥಾಪನೆ ಗಮನಾರ್ಹ. ನಾಲ್ಕು ವರ್ಷದ ಅವಧಿಯಲ್ಲಿ ಕೆಲವೊಂದು ಪ್ರಶಸ್ತಿಗಳೂ ಕೂಡ ಬಂದಿವೆ. ಇದಲ್ಲದೇ ತಮ್ಮದೇ ಇಲಾಖೆಯಲ್ಲಿ ನಡೆದ ಭಾರೀ ಅವ್ಯವಹಾರಗಳನ್ನು ಪತ್ತೆ ಹಚ್ಚಿ ತನಿಖೆಗೆ ಒಳಪಡಿಸಿದ ಸಚಿವರ ಕಾರ್ಯ ಶ್ಲಾಘನೀಯ.

ಕೃಷಿ ಸಚಿವರಿಂದಲೂ ಮೆಚ್ಚುಗೆ ಪರ್ಫಾಮೆನ್ಸ್ 

ಕೃಷಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡದಿದ್ರೂ ಕೃಷಿ ಭಾಗ್ಯ ಯೋಜನೆ ಸರ್ಕಾರದ ವರ್ಚಸ್ಸು ಹೆಚ್ಚಿಸಿದೆ.. ಹಾಗೇನೆ ಬಿತ್ತನೆ ಬೀಜ ಮತ್ತು ಗೊಬ್ಬರದ ಸಮಸ್ಯೆ ಬಿಗಡಾಯಿಸದಂತೆ ನೋಡಿಕೊಂಡಿದ್ದು, ಕೃಷಿ ಬೆಲೆ ಆಯೋಗ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಳ ಹೀಗೆ ಕೆಲ ಗಮನಾರ್ಹ ಕಾರ್ಯಗಳು ನಡೆದಿವೆ.

ಆರೋಗ್ಯ ಇಲಾಖೆಗೆ ಆರೋಗ್ಯಕರ ಸ್ಪರ್ಶ

ಸಚಿವ ರಮೇಶ್​ ಕುಮಾರ್ ಆರೋಗ್ಯ ಇಲಾಖೆಗೆ ಒಂದಷ್ಟು ಆರೋಗ್ಯಕರ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಆಂಬ್ಯುಲೆನ್ಸ್​ ಸಂಖ್ಯೆ ಹೆಚ್ಚಳ, ಗ್ರಾಮೀಣ ಪ್ರದೇಶಕ್ಕೂ ಆಂಬ್ಯುಲೆನ್ಸ್​ ಸೇವೆ. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿಒರುದ್ಧ ನಿರ್ಧಾಕ್ಷಿಣ್ಯ ಕ್ರಮ. ಆಸ್ಪತ್ರೆಗಳ ವ್ಯವಸ್ಥೆ ಸುಧಾರಣೆಯಂತ ಉತ್ತಮ ಕೆಲಸಗಳಾಗಿವೆ.

ಇದಲ್ಲದೇ ಆರೋಗ್ಯ ಸಚಿವರಾಗಿ ಒಂದಷ್ಟು ಹೆಸರು ಮಾಡಿದ್ದ ಸಚಿವ ಯು.ಟಿ. ಖಾದರ್​ ಆಹಾರ ಸಚಿವರಾಗಿ ಸ್ವಲ್ಪ ಎಡವಿದ್ರೂ ತಮ್ಮ ಸರಳತೆಯಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಗಮನ ಸೆಳೆದವರು. ಹೀಗೆ ಒಂದಷ್ಟು ಸಚಿವರ ಸಾಧನೆ ಸಿದ್ದರಾಮಯ್ಯ ಸರ್ಕಾರದ ಇಮೇಜ್​ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​