ಸರ್ಕಾರಿ ಸೇವೆಗಳನ್ನು ಬಿಟ್ಟು ಇತರೆ ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಸುಪ್ರೀಂ ತೀರ್ಪು ನೀಡಿತ್ತು. ಆದರೆ ಈಗ ಗ್ರಾಹಕರ ವೈಯಕ್ತಿಕ ವಿವರ ಪರಿಶೀಲನೆಗೆ ಪರದಾಡುತ್ತಿರುವ ಬ್ಯಾಂಕುಗಳು ಹಾಗೂ ಮೊಬೈಲ್‌ ಸೇವಾದಾತ ಕಂಪನಿಗಳ ಅನುಕೂಲಕ್ಕಾಗಿ 2 ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ: ಸರ್ಕಾರಿ ಸವಲತ್ತುಗಳನ್ನು ಹೊರತುಪಡಿಸಿ ಬೇರಾವ ಸೇವೆಗೂ ಆಧಾರ್‌ ಕಡ್ಡಾಯಗೊಳಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಗ್ರಾಹಕರ ವೈಯಕ್ತಿಕ ವಿವರ ಪರಿಶೀಲನೆಗೆ ಪರದಾಡುತ್ತಿರುವ ಬ್ಯಾಂಕುಗಳು ಹಾಗೂ ಮೊಬೈಲ್‌ ಸೇವಾದಾತ ಕಂಪನಿಗಳ ಅನುಕೂಲಕ್ಕಾಗಿ 2 ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗಳನ್ನು ಆಧಾರ್‌ ಸಂಖ್ಯೆ ಜತೆ ಲಿಂಕ್‌ ಮಾಡಿಸುವ ಸ್ವಯಂಪ್ರೇರಿತ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸುವ ಸಲುವಾಗಿ ಟೆಲಿಗ್ರಾಫ್‌ ಆ್ಯಕ್ಟ್ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಕುರಿತು ಗಂಭೀರವಾಗಿ ಪರಿಶೀಲನೆಯಲ್ಲಿ ತೊಡಗಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಕುರಿತು ಇಟ್ಟಿರುವ ಪ್ರಸ್ತಾವವೊಂದು ಕಾನೂನು ಪರಾಮರ್ಶೆಗೆ ಒಳಪಟ್ಟಿದೆ. ಹಣಕಾಸು ಹಾಗೂ ದೂರಸಂಪರ್ಕ ಸಚಿವಾಲಯಗಳು ಆ ಪ್ರಸ್ತಾವವನ್ನು ಸದ್ಯ ಪರಿಶೀಲಿಸುತ್ತಿವೆ ಎಂದು ಆಂಗ್ಲ ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.

ಗ್ರಾಹಕರ ವಿವರ ಪರಿಶೀಲನೆಗೆ ಆಧಾರ್‌ ಸಂಖ್ಯೆಯನ್ನು ಖಾಸಗಿ ಸಂಸ್ಥೆಗಳು ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೆಲ ತಿಂಗಳ ಹಿಂದೆ ತೀರ್ಪು ನೀಡಿತ್ತು. ಹೀಗಾಗಿ ಸರ್ಕಾರ ಕಾಯ್ದೆಯ ಮೊರೆ ಹೊಗಿದೆ.

ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ದೂರಸಂಪರ್ಕ ಸೇವೆಗಳನ್ನು ಬಳಸಿಕೊಳ್ಳುವ ಅಥವಾ ಸಂಪೂರ್ಣವಾಗಿ ವಶಕ್ಕೆ ಪಡೆಯುವ ಅವಕಾಶ ಟೆಲಿಗ್ರಾಫ್‌ ಕಾಯ್ದೆಯಡಿ ಸರ್ಕಾರಕ್ಕೆ ಉಪಲಬ್ಧವಿದೆ. ಅದೇ ಕಾಯ್ದೆಗೆ ತಿದ್ದುಪಡಿ ತಂದು ಇ- ಕೆವೈಸಿ ಆಯ್ಕೆಯಲ್ಲಿ ಆಧಾರ್‌ ಎಂಬ ಮತ್ತೊಂದು ಅವಕಾಶವನ್ನು ನೀಡಲು ಸರ್ಕಾರ ಯತ್ನಿಸುತ್ತಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಐಚ್ಛಿಕವಾಗಿ ಆಧಾರ್‌ ಲಿಂಕ್‌ ಮಾಡಿಸುವ ಅವಕಾಶ ಕಲ್ಪಿಸಲು ಮುಂದಾಗಿದೆ.

ನಿಮ್ಮ ಈ ದಾಖಲೆಯ ಜೊತೆಗೆ ಆಧಾರ್‌ ಲಿಂಕ್‌ ಕಡ್ಡಾಯ?

ಬ್ಯಾಂಕ್‌ಗೆ ಆಫ್‌ಲೈನ್‌ ಆಧಾರ್‌? ಏನಿದು..?