ನವದೆಹಲಿ: ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳ ಅನುಕೂಲಕ್ಕಾಗಿ ‘ಆಫ್‌ಲೈನ್‌ ಆಧಾರ್‌’ ಆಯ್ಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿ ತೊಡಗಿದೆ.

ಆಧಾರ್‌ ಸಂಖ್ಯೆಯನ್ನು ಬಯೋಮೆಟ್ರಿಕ್‌ ವಿವರದೊಂದಿಗೆ ಪರಿಶೀಲನೆ ನಡೆಸಿ, ಗ್ರಾಹಕರ ಗುರುತನ್ನು ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಇದಕ್ಕಾಗಿ ಗ್ರಾಹಕರ ಬೆರಳನ್ನು ಸ್ಕ್ಯಾನ್ ಮಾಡಲಾಗುತ್ತಿತ್ತು. ಆದರೆ ಸುಪ್ರೀಂಕೋರ್ಟ್‌ ಅಂತಹ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ‘ಆಫ್‌ಲೈನ್‌ ಆಧಾರ್‌’ ಮೊರೆ ಹೋಗುವ ನಿಟ್ಟಿನಲ್ಲಿ ಸರ್ಕಾರವು ರಿಸರ್ವ್ ಬ್ಯಾಂಕ್‌ ಜತೆ ಗಂಭೀರ ಸಮಾಲೋಚನೆಯಲ್ಲಿ ನಿರತವಾಗಿದೆ.

ಆಧಾರ್‌ ಪ್ರಾಧಿಕಾರದ ವೆಬ್‌ಸೈಟ್‌ಗೆ ಹೋಗಿ ‘ಆಧಾರ್‌ ಪೇಪರ್‌ಲೆಸ್‌ ಲೋಕಲ್‌ ಇ-ಕೆವೈಸಿ’ ಟ್ಯಾಬ್‌ ಮೂಲಕ ಆಫ್‌ಲೈನ್‌ ಆಧಾರ್‌ ಸೃಷ್ಟಿಸಿಕೊಳ್ಳಬಹುದು. ಅದರಲ್ಲಿ ಕ್ಯುಆರ್‌ ಕೋಡ್‌ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದಾಗ ಆಫ್‌ಲೈನ್‌ ಆಧಾರ್‌ ಮಾಲೀಕನ ಹೆಸರು, ಫೋಟೋ, ವಿಳಾಸವಷ್ಟೇ ಸಿಗುತ್ತದೆ. ಇದು ಪಕ್ಕಾ ಮಾಹಿತಿಯಾಗಿರುತ್ತದೆ. ಜತೆಗೆ ಆಧಾರ್‌ ಸರ್ವರ್‌ ಜತೆ ಯಾವುದೇ ನಂಟು ಇರುವುದಿಲ್ಲ. ಹೀಗಾಗಿ ಈ ಆಯ್ಕೆ ಬಳಕೆಗೆ ಪರಿಶೀಲನೆ ನಡೆಯುತ್ತಿದೆ.

ಆಧಾರ್‌ ವೆಬ್‌ಸೈಟ್‌ನಲ್ಲಿ ಆಫ್‌ಲೈನ್‌ ಆಧಾರ್‌ ಮಾಹಿತಿ ನಮೂದಿಸುವಾಗ ಹೆಸರು, ವಿಳಾಸ ಮಾತ್ರವೇ ಅಲ್ಲದೆ ದೂರವಾಣಿ ಸಂಖ್ಯೆ, ಲಿಂಗ ಮತ್ತಿತರ ಮಾಹಿತಿಯನ್ನು ಬಹಿರಂಗಪಡಿಸುವ ಆಸೆ ಇದ್ದರೆ ಅದಕ್ಕೆ ಆಯ್ಕೆಯೂ ಇರುತ್ತದೆ.