ದೇಶದ ಪ್ರತಿಯೋರ್ವ ನಾಗರಿಕನೂ ಹೊಂದಿರುವ ಈ ಪ್ರಮುಖ ದಾಖಲೆಯೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲು ಚಿಂತನೆ ನಡೆದಿದೆ. ಚುನಾವಣಾ ಆಯೋಗವು, ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜತೆ ಸಂಯೋಜಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲು ಯೋಚಿಸುತ್ತಿದೆ.

ನವದೆಹಲಿ :  ಆಧಾರ್‌ ಸಂಖ್ಯೆಯನ್ನು ಕೇವಲ ಪಾನ್‌ ಕಾರ್ಡ್‌ ಹಾಗೂ ಸರ್ಕಾರದ ಸವಲತ್ತು ಸಿಗುವ ಯೋಜನೆಗಳ ಪ್ರಯೋಜನ ಪಡೆಯಲು ಮಾತ್ರ ಸಂಯೋಜಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಚುನಾವಣಾ ಆಯೋಗವು, ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜತೆ ಸಂಯೋಜಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲು ಯೋಚಿಸುತ್ತಿದೆ.

ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆ-1951 ತಿದ್ದುಪಡಿ ಆಗಬೇಕಿದ್ದು, ಕಾನೂನು ಸಚಿವಾಲಯಕ್ಕೆ ಈ ಪ್ರಸ್ತಾಪವನ್ನು ರವಾನಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ ಆಯೋಗವು ಆಧಾರ್‌ ಪ್ರಾಧಿಕಾರದ ಸಲಹೆ ಕೇಳಿದೆ. ಆಗ ಆಧಾರ್‌ ಪ್ರಾಧಿಕಾರವು, ‘ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಆಧಾರ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಸಂಯೋಜಿಸಲು ಸಾಧ್ಯವಾಗದೇ ಹೋಗಬಹುದು. ಕೇವಲ ಸೀಮಿತ ಉದ್ದೇಶಕ್ಕೆ ಅವಕಾಶ ನೀಡಬಹುದು’ ಎಂದು ತಿಳಿಸಿತು ಎನ್ನಲಾಗಿದೆ. ಹೀಗಾಗಿ ಸಂಯೋಜನೆಗೆ ಯಾವುದೇ ಕಾನೂನಿನ ಅಡೆತಡೆ ಬಾರದಂತಾಗಲು ಕಾನೂನು ಸಚಿವಾಲಯಕ್ಕೆ ಪ್ರಸ್ತಾಪ ಕಳಿಸಲು ಆಯೋಗ ನಿರ್ಧರಿಸಿದೆ. ಸಚಿವಾಲಯ ಒಪ್ಪಿದರೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯವಾಗಲಿದೆ.

ಕಳೆದ ಆಗಸ್ಟ್‌ನಲ್ಲಿ ಚುನಾವಣಾ ಆಯೋಗ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಆಧಾರ್‌ ಸಂಯೋಜನೆಗೆ ಪಕ್ಷಗಳ ಒಲವು ವ್ಯಕ್ತವಾಗಿತ್ತು.

ಲಾಭ ಏನು?

ಈಗ ಒಬ್ಬನೇ ಮತದಾರ ಬೇರೆ ಬೇರೆ ಊರುಗಳಲ್ಲಿ ಗುರುತು ಚೀಟಿಗಳನ್ನು ಹೊಂದಿ ಮತದಾರನಾಗಿರುವ ಉದಾಹರಣೆಗಳಿವೆ. ಈ ರೀತಿಯ ಮತದಾರ ಗುರುತು ಚೀಟಿಗಳು ಆಧಾರ್‌ ಸಂಯೋಜನೆಯಿಂದ ರದ್ದಾಗಲಿವೆ. ಒಬ್ಬ ಮತದಾರನಿಗೆ ಒಂದೇ ಗುರುತಿನ ಚೀಟಿ ಲಭಿಸಲಿದ್ದು, ‘ಡೂಪ್ಲಿಕೇಶನ್‌’ ತಪ್ಪಲಿದೆ. ಇನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗಾಗಿ ಇಂಟರ್ನೆಟ್‌ ಆಧರಿತ ಮತದಾನಕ್ಕೂ ಆಧಾರ್‌ ಅನುಕೂಲ ಕಲ್ಪಿಸಲಿದೆ.