ನೀತಿ ಆಯೋಗದಿಂದ ಪ್ರಸ್ತಾವ| ಪೆಟ್ರೋಲ್‌, ಡೀಸೆಲ್‌ ಕಾರುಗಳಿಗೆ 12 ಸಾವಿರ ರು. ಮಾಲಿನ್ಯ ಶುಲ್ಕ?| ಸಂಗ್ರಹವಾದ ಹಣದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ

ನವದೆಹಲಿ[ಡಿ.20]: ಎಲೆಕ್ಟ್ರಿಕ್‌ ವಾಹನಗಳ ಖರೀದಿ ಹಾಗೂ ಬ್ಯಾಟರಿ ಉತ್ಪಾದನೆಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ಮಾಲಿನ್ಯ ಉಂಟು ಮಾಡುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳಿಂದ ಶುಲ್ಕ ಸಂಗ್ರಹಿಸಲು ಕೇಂದ್ರ ಸರ್ಕಾರ ಕರಡು ಯೋಜನೆಯೊಂದನ್ನು ರೂಪಿಸಿದೆ.

ಈಗ ಸಿದ್ಧವಾಗಿರುವ ನೀತಿಯ ಪ್ರಕಾರ, ಹೊಸ ಪೆಟ್ರೋಲ್‌ ಹಾಗೂ ಡೀಸೆಲ್‌ ಕಾರುಗಳನ್ನು ಖರೀದಿಸುವವರಿಂದ 12 ಸಾವಿರ ರು. ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಈ ಶುಲ್ಕವನ್ನು ವಿದ್ಯುತ್‌ ಚಾಲಿನ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳನ್ನು ಖರೀದಿಸುವವರಿಗೆ ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. ಈ ಪ್ರೋತ್ಸಾಹಧನ ಯೋಜನೆ ಜಾರಿಯಾದ ಮೊದಲ ವರ್ಷ 25 ಸಾವಿರದಿಂದ 50 ಸಾವಿರ ರು.ವರೆಗೆ ಇರಲಿದೆ. ವಾಹನ ತಯಾರಿಕಾ ಕಂಪನಿಗಳು ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಎಲೆಕ್ಟ್ರಿಕ್‌ ವಾಹನ ಖರೀದಿಸುವವರಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಸಂಸ್ಥೆಗಳು ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸಿದರೆ ಕಿ.ಮೀ. ಆಧಾರದಲ್ಲಿ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ.

ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜತೆಗಿನ ಸಭೆ ಬಳಿಕ ನೀತಿ ಆಯೋಗ ಈ ಶುಲ್ಕ ಬರೆ ಕುರಿತ ಪ್ರಸ್ತಾವವನ್ನು ಸಿದ್ಧಪಡಿಸಿದೆ. ಕೇಂದ್ರ ಸರ್ಕಾರದ ಅನುಮತಿ ಬಳಿಕ ಇದು ಜಾರಿಗೆ ಬರಲಿದೆ.

ಹೊಸ ಕಾರುಗಳಿಗೆ ಶುಲ್ಕ ವಿಧಿಸುವ ಮೂಲಕ 7500 ಕೋಟಿ ರು. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಪೆಟ್ರೋಲ್‌/ಡೀಸೆಲ್‌ ಚಾಲಿತ ದ್ವಿಚಕ್ರ ವಾಹನ, ತ್ರಿಚಕ್ರ ಹಾಗೂ ವಾಣಿಜ್ಯ ವಾಹನಗಳಿಗೆ ಮೊದಲ ವರ್ಷ 500ರಿಂದ 25 ಸಾವಿರ ರು. ವಿಧಿಸುವ ಪ್ರಸ್ತಾಪವಿದೆ. ನಾಲ್ಕನೇ ವರ್ಷದಿಂದ ಈ ಮೊತ್ತ 4500ರಿಂದ 90 ಸಾವಿರ ರು.ವರೆಗೂ ಏರಿಸುವ ಚಿಂತನೆ ಇದೆ ಎಂದು ವರದಿಗಳು ತಿಳಿಸಿವೆ.