ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಒಟ್ಟು 1,70,025 ಮಂದಿ ತೆರಳಲು ಅವಕಾಶವಿದ್ದು, ಅವುಗಳಲ್ಲಿ 45000 ಮಂದಿ ಖಾಸಗಿ ಸಂಸ್ಥೆಗಳ ಮೂಲಕ ಹೋಗಬಹುದು.
ನವದೆಹಲಿ (ಮಾ.10): ಸೌದಿ ಅರೇಬಿಯಾವು ಹಜ್ ಕೋಟಾವನ್ನು ಹೆಚ್ಚಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಹಜ್ ಕೋಟಾದಲ್ಲಿ ಹೆಚ್ಚಳ ಮಾಡಿದೆ.
ಕಳೆದ ಗುರುವಾರ ಕೇಂದ್ರ ಸರ್ಕಾರವು ಪರಿಷ್ಕೃತ ಕೋಟಾವನ್ನು ಪ್ರಕಟಿಸಿದ್ದು 14 ಮಾರ್ಚ್’ನಿಂದ ಲಾಟರಿ ಮೂಲಕ ಯಾತ್ರಾರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.
ಕಳೆದ ಜನವರಿಯಲ್ಲಿ ಸೌದಿ ಅರೇಬಿಯಾದೊಂದಿಗೆ ಅಲ್ಪಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾಡಿರುವ ಒಪ್ಪಂದದ ಮೇರೆಗೆ ಭಾರತದ ಹಜ್ ಕೋಟಾವನ್ನು 34,005ರಷ್ಟು ಹೆಚ್ಚಿಸಲಾಗಿದೆ.
ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಒಟ್ಟು 1,70,025 ಮಂದಿ ತೆರಳಲು ಅವಕಾಶವಿದ್ದು, ಅವುಗಳಲ್ಲಿ 45000 ಮಂದಿ ಖಾಸಗಿ ಸಂಸ್ಥೆಗಳ ಮೂಲಕ ಹೋಗಬಹುದು. ಕಳೆದ ಬಾರಿ ವಿವಿಧ ರಾಜ್ಯಗಳ ಹಜ್ ಕಮಿಟಿಗಳ ಮೂಲಕ ಭಾರತದಿಂದ 99903 ಮಂದಿ ಹಜ್ ಯಾತ್ರೆಗೆ ತೆರಳಿದ್ದರೆ, 36000 ಮಂದಿ ಖಾಸಗಿ ಸಂಸ್ಥೆಗಳ ಮೂಲಕ ಹಜ್ ಯಾತ್ರೆಗೆ ತೆರಳಿದ್ದಾರೆ.
ಹೊಸ ಕೋಟಾದನ್ವಯ ಕರ್ನಾಟಕದಿಂದ ಬಾರಿ 5951 ಮಂದಿಗೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿದೆ. ಕಳೆದ ಬಾರಿ ಕರ್ನಾಟಕದಿಂದ 4477 ಮಂದಿ ಹಜ್ ಯಾತ್ರೆ ಕೈಗೊಂಡಿದ್ದರು. ಕೋಟಾ ಹಂಚಿಕೆಯು 2011ರ ಜನಗಣತಿಯ ಆಧಾರದಲ್ಲಿ ಮಾಡಲಾಗುತ್ತದೆ.
ಯಾತ್ರೆ ಪ್ರಕ್ರಿಯೆ ಡಿಜಿಟಲೀಕರಣ:
ಹಜ್ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನವು ಕೂಡಾ ಯಶಸ್ವಿಯಾಗಿದೆ. ಮೊದಲ ಪ್ರಯತ್ನದಲ್ಲೇ ಒಟ್ಟು 1,29,196 ಆನ್’ಲೈನ್ ಅರ್ಜಿಗಳು ಬಂದಿದ್ದು, ಕೇರಳದಿಂದ ಅತೀ ಹೆಚ್ಚು (34783) ಆನ್’ಲೈನ್ ಅರ್ಜಿಗಳು ಸಲ್ಲಿಕೆಯಾಗಿವೆ.
ಕೇಂದ್ರ ಸರ್ಕಾರವು ಕಳೆದ ಜನವರಿ 2ರಂದು ಹಜ್ ಕಮಿಟಿ ಆಫ್ ಇಂಡಿಯಾ ಎಂಬ ಮೊಬೈಲ್ ಅಪ್’ನ್ನು ಕೂಡಾ ಬಿಡುಗಡೆಮಾಡಿದ್ದು, ಕಳೆದ ಡಿಸೆಂಬರ್’ನಲ್ಲಿ ನೂತನ ವೆಬ್’ಸೈಟ್’ಗೆ ಚಾಲನೆ ನೀಡಿದೆ.
