ವಾಟ್ಸ್‌ಆ್ಯಪ್, ಟ್ವೀಟರ್, ಇನ್‌ಸ್ಟಾಗ್ರಾಂಗಳಲ್ಲಿ ಇತ್ತೀಚೆಗೆ ಕೆಲ ಗಂಟೆಗಳ ಕಾಲ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಫೋಟೋ ಮತ್ತು ವಿಡಿಯೋಗಳು ಡೌನ್‌ಲೋಡ್ ಆಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಟ್ಸ್‌ಆ್ಯಪನ್ನು ನಿಷೇಧಿಸುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಆದ ಸಂದೇಶದಲ್ಲಿ, ‘ವಾಟ್ಸ್‌ಆ್ಯಪನ್ನು ರಾತ್ರಿ 11.30 ರಿಂದ ಬೆಳಿಗ್ಗೆ ೬ರ ವರೆಗೆ ಬಂದ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಆದೇಶಿಸಿದ್ದಾರೆ. ಈ ಸಂದೇಶವನ್ನು ಎಲ್ಲರಿಗೂ ಫಾರ್ವಡ್ ಮಾಡಲು ಕೋರಲಾಗಿದೆ. ಈ ಸಂದೇಶವನ್ನುಕನಿಷ್ಠ 10 ಜನರಿಗೆ ಕಳುಹಿಸದೇ ಇದ್ದಲ್ಲಿ ವಾಟ್ಸ್‌ಆ್ಯಪ್ ಬಳಕೆಗೆ ಹಣ ಪಾವತಿಸಬೇಕಾಗುತ್ತದೆ ಎಂದೂ ಹೇಳಲಾಗಿತ್ತು. ಇದೇ ರೀತಿಯ ಇನ್ನೊಂದು ಸಂದೇಶದಲ್ಲಿ ಗೂಗಲ್, ವಾಟ್ಸ್ ಆ್ಯಪನ್ನು ಇನ್ನೊಂದು ವಾರದ ಮಟ್ಟಿಗೆ ನಿಷೇಧಿಸಿದೆ ಎಂದೂ ಹೇಳಲಾಗಿತ್ತು.

ಈ ಸಂದೇಶ ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ವಾಸ್ತವವೇ ಬೇರೆ. ಜುಲೈ೩ರ (ಬುಧವಾರ) ಸಂಜೆ ವಾಟ್ಸ್‌ಆ್ಯಪ್ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದನ್ನು ಟ್ವೀಟರ್ ಮೂಲಕ ಸ್ಪಷ್ಟಪಡಿಸಲಾಯಿತು. ಹಾಗೆಯೇ ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡದಿದ್ದರೆ ವಾಟ್ಸಪ್ ಬಳಕೆಗೆ ಹಣ ಪಾವತಿಸಬೇಕಾಗುತ್ತದೆ ಎಂಬುದೂ ಸುಳ್ಳು
ಸುದ್ದಿ. ಹಾಗೆಯೇ ರಾತ್ರಿ 11 ರಿಂದ ಬೆಳಗ್ಗೆ 6 ರ ವರೆಗೆ ವಾಟ್ಸಪ್ ಬಂದ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ. ಹಾಗಾಗಿ ಇವೆಲ್ಲವೂ ಸಂಪೂರ್ಣ ಸುಳ್ಳುಸುದ್ದಿ.

- ವೈರಲ್ ಚೆಕ್