ನವದೆಹಲಿ(ಫೆ.22): ಆಘ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ನಾಗರಿಕತ್ವ ನೀಡುವ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ಹಿಂಸಾಚಾರ ವ್ಯಕ್ತವಾದ ಬೆನ್ನಲ್ಲೇ, ಇದೀಗ ಈ ಭಾಗದಲ್ಲಿ ಯಾವುದೇ ವಾರೆಂಟ್‌ ಇಲ್ಲದೆ ಯಾರನ್ನು ಬೇಕಾದರೂ ಬಂಧಿಸಬಹುದಾದ ಹಕ್ಕನ್ನು ಕೇಂದ್ರ ಸರ್ಕಾರ ಅಸ್ಸಾಂ ರೈಫಲ್ಸ್‌ ಸಿಬ್ಬಂದಿಗಳಿಗೆ ನೀಡಿದೆ. 

ಈ ಬಗ್ಗೆ ಗುರುವಾರ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ‘ಅಪರಾಧ ದಂಡ ಸಂಹಿತೆಯಡಿ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಯಾವುದೇ ವಾರಂಟ್‌ ಇಲ್ಲದೆಯೇ ಯಾರನ್ನು ಬೇಕಾದರೂ ಬಂಧಿಸಬಹುದು ಹಾಗೂ ಯಾವ ಸ್ಥಳವನ್ನು ಬೇಕಾದರೂ ಯಾವುದೇ ಮುನ್ಸೂಚನೆ ನೀಡದೇ, ಪರಿಶೀಲನೆ ನಡೆಸಬಹುದಾದ ಪರಮಾಧಿಕಾರವನ್ನು ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿಗೆ ನೀಡಲಾಗಿದೆ’ ಎಂದು ತಿಳಿಸಿದೆ.

ಗೃಹಸಚಿವಾಲಯದ ಸುತ್ತೋಲೆಯ ಪ್ರಕಾರ, ಅಸ್ಸಾಂ ರೈಫಲ್ಸ್’ನ ಆಫೀಸರ್ ಶ್ರೇಣಿಯಿಂದ ಹಿಡಿದು ಕೆಳಹಂತದ ಸಿಬ್ಬಂದಿಯವರೆಗೆ ಈ ಪರಮೋಚ್ಛ ಅಧಿಕಾರವನ್ನು ನೀಡಲಾಗಿದೆ ಎಂದು ತಿಳಿಸಿದೆ.