ಸರಣಿ ಟ್ವೀಟ್’ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಚಿದಂಬರಂ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಹುಡುಕುವುದೇ ಬುದ್ದಿವಂತಿಕೆಯ ನಡೆ
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆಯೆಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಗೃಹ ಮಂತ್ರಿ ಪಿ.ಚಿದಂಬರಂ ಹೇಳಿದ್ದಾರೆ.
ಸರಣಿ ಟ್ವೀಟ್’ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಚಿದಂಬರಂ, ಸರ್ಕಾರ ಕೈಗೊಂಡ ಕ್ರಮಗಳು ಹೇಗೆ ವಿಫಲವಾಗಿವೆ ಎಂದು ವಿವರಿಸಿದ್ದಾರೆ.
ಕಳೆದ ಡಿ.30-31 ರಾತ್ರಿ ಸಿಆರ್’ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 5 ಮಂದಿ ಸಿಬ್ಬಂದಿ ಸಾವನ್ನಪಿರುವುದನ್ನು ಉಲ್ಲೇಖಿಸಿರುವ ಮಾಜಿ ಗೃಹಮಂತ್ರಿ, ಉಗ್ರರ ಸಂಖ್ಯೆ, ಭದ್ರತಾ ಸಿಬ್ಬಂದಿಗಳು ಹಾಗೂ ನಾಗರೀಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಸಂಧಾನಕಾರರಾಗಿ ವಿಶೇಷ ಪ್ರತಿನಿಧಿಗಳನ್ನು ಕಳುಹಿಸಿದ್ದು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಅದೊಂದು ಚುನಾವಣಾ ಪೂರ್ವ ಗಿಮಿಕ್ ಆಗಿದೆಯೆಂದು ಸಂಬಂಧಪಟ್ಟವರ ಅಭಿಪ್ರಾಯವಾಗಿತ್ತು, ಎಂದು ಚಿದಂಬರಂ ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಹುಡುಕುವುದೇ ಬುದ್ದಿವಂತಿಕೆಯ ನಡೆ; ಆ ನಿಟ್ಟಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಡಾ. ಮನಮೋಹನ್ ಸಿಂಗ್ ಅವರ ಪ್ರಯತ್ನಗಳು ಶ್ಲಾಘನೀಯವೆಂದು ಚಿದಂಬರಂ ಹೇಳಿದ್ದಾರೆ.
