ನೌಕಾಪಡೆಯ ಬಳಕೆಗಾಗಿ 111 ಯುಟಿಲಿಟಿ ಹೆಲಿಕಾಪ್ಟರ್‌ಗಳ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಖರೀದಿ ಮೌಲ್ಯ 21 ಸಾವಿರ ಕೋಟಿ ರುಪಾಯಿ ಆಗಲಿದೆ.
ನವದೆಹಲಿ : ಒಂದೆಡೆ ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಗದ್ದಲ ಎಬ್ಬಿಸಿರುವ ನಡುವೆಯೇ ಇನ್ನೊಂದು ಬಹುದೊಡ್ಡ ರಕ್ಷಣಾ ಖರೀದಿ ವ್ಯವಹಾರವನ್ನು ಕೇಂದ್ರ ಸರ್ಕಾರ ಶನಿವಾರ ಅಂತಿಮಗೊಳಿಸಿದೆ.
ನೌಕಾಪಡೆಯ ಬಳಕೆಗಾಗಿ 111 ಯುಟಿಲಿಟಿ ಹೆಲಿಕಾಪ್ಟರ್‌ಗಳ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಖರೀದಿ ಮೌಲ್ಯ 21 ಸಾವಿರ ಕೋಟಿ ರುಪಾಯಿ. ರಕ್ಷಣಾ ಖರೀದಿ ಪರಿಷತ್ ಸಭೆಯಲ್ಲಿ ಶನಿವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ರಕ್ಷಣಾ ಖರೀದಿ ಪರಿಷತ್ತು, ರಕ್ಷಣಾ ಖರೀದಿ ವಹಿವಾಟಿಗೆ ಸಂಬಂಧಿಸಿದ ಸರ್ವೋನ್ನತ ನಿರ್ಣಾಯಕ ಸಂಸ್ಥೆಯಾಗಿದೆ.
ಇದೇ ವೇಳೆ ಹೆಲಿಕಾಪ್ಟರ್‌ನ 21000 ಕೋಟಿ ರು. ಸೇರಿದಂತೆ ಒಟ್ಟಾರೆ 46 ಸಾವಿರ ಕೋಟಿ ರುಪಾಯಿ ಮೌಲ್ಯದ ಸೇನಾ ಸಲಕರಣೆ ಖರೀದಿಗೆ ರಕ್ಷಣಾ ಖರೀದಿ ಪರಿಷತ್ ಒಪ್ಪಿಕೊಂಡಿದೆ. ಹೆಲಿಕಾಪ್ಟರ್ ಹೆಲಿಕಾಪ್ಟರ್ ಖರೀದಿ ಹೊರತುಪಡಿಸಿದಂತೆ ಇತರ ರಕ್ಷಣಾ ಸಲಕರಣೆಗಳ ಖರೀದಿ ಮೊತ್ತ 24,879 ಕೋಟಿ ರು. ಮೌಲ್ಯದ್ದಾಗಲಿದೆ. ಇದರಲ್ಲಿ 150 ದೇಶೀ 155 ಎಂಎಂ ಆರ್ಟಿಲರಿ ಗನ್‌ಗಳೂ ಸೇರಿವೆ. ಆರ್ಟಿಲರಿ ಗನ್ ಖರೀದಿಗೇ 3,364 ಕೋಟಿ ರು. ಬೇಕು.
ಯಾರಿಂದ ಖರೀದಿ?: 111 ಹೆಲಿಕಾಪ್ಟರ್‌ಗಳನ್ನು ಇದೇ ಮೊದಲ ಬಾರಿಗೆ ವ್ಯೂಹಾತ್ಮಕ ಸಹಭಾಗಿತ್ವ ಮಾದರಿಯಲ್ಲಿ ಖರೀದಿಸಲಾಗುತ್ತದೆ. ಖಾಸಗಿ ಕಂಪನಿಗಳನ್ನು ಆಹ್ವಾನಿಸಿ ಭಾರತದಲ್ಲೇ ವಿದೇಶಿ ಉತ್ಪಾದಕರೊಂದಿಗೆ ಸಹಭಾಗಿತ್ವ ಮಾಡಿಕೊಂಡು ಹೆಲಿಕಾಪ್ಟರ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತಿದೆ.
ಯಾವುದಕ್ಕೆ ಹೆಲಿಕಾಪ್ಟರ್ ಬಳಕೆ?: ಹೊಸದಾಗಿ ನೌಕಾಪಡೆ ಸೇರಲಿರುವ 111 ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ದಾಳಿಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರ ಜತೆಗೆ ರಕ್ಷಣಾ ಕಾರ್ಯದಲ್ಲಿ ಹಾಗೂ ಕಣ್ಗಾವಲಿಗಾಗಿ ಬಳಕೆ ಮಾಡಿಕೊಳ್ಳಲಾಆಗುತ್ತದೆ. ಆರ್ಟಿಲರಿ ಗನ್: ಇನ್ನು ಆರ್ಟಿಲರಿ ಗನ್‌ಗಳನ್ನು ಡಿಆರ್‌ಡಿಒ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತದೆ. ಡಿಆರ್‌ಡಿಒ ನಾಮಾಂಕಿತ ಕಂಪನಿಗಳು ಇವುಗಳನ್ನು ಉತ್ಪಾದಿಸಲಿವೆ.
ಕ್ಷಿಪಣಿ ವ್ಯವಸ್ಥೆ: 14 ಕಡಿಮೆ ದೂರದ ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಕೂಡ ನಿರ್ಧರಿಸಲಾಗಿದೆ. ಇದರಲ್ಲಿ 10 ವ್ಯವಸ್ಥೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಹಡಗುಗಳನ್ನು ಉಡಾಯಿಸಲು ವೈರಿಗಳು ಹಾರಿ ಬಿಡುವ ಕ್ಷಿಪಣಿಗಳನ್ನು ತಡೆಯಲು ಈ ಕ್ಷಿಪಣಿ ನಿರೋಧಕ ವ್ಯವಸ್ಥೆ ನೆರವಾಗಲಿದೆ.
