ರಾಜ್ಯ ಸರ್ಕಾರದಿಂದ 10 ಹೊಸ ಯೋಜನೆಗಳಿಗೆ ಅನುಮೋದನೆ

First Published 25, Jan 2018, 7:36 AM IST
Govt Approved 10 New Project
Highlights

ಬಿಬಿಎಂಪಿ ವ್ಯಾಪ್ತಿಯಲ್ಲಿ 2400 ಕೋಟಿ ರು.ಗಳಿಗೂ ಹೆಚ್ಚು ಮೊತ್ತದ ಹೊಸ 10 ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸದ್ದಿಲ್ಲದೆ ಅನುಮೋದನೆ ನೀಡಿದೆ.

ಬೆಂಗಳೂರು (ಜ.25): ಬಿಬಿಎಂಪಿ ವ್ಯಾಪ್ತಿಯಲ್ಲಿ 2400 ಕೋಟಿ ರು.ಗಳಿಗೂ ಹೆಚ್ಚು ಮೊತ್ತದ ಹೊಸ 10 ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸದ್ದಿಲ್ಲದೆ ಅನುಮೋದನೆ ನೀಡಿದೆ. ಈಗಾಗಲೇ ಅನುಮೋದಿಸಿರುವ 7,300 ಕೋಟಿ ರು.ಗಳ ಬೃಹತ್ ಮೊತ್ತದ ಯೋಜನೆಗಳಿಗೆ ಸರ್ಕಾರ ಈ ವರೆಗೆ ನೀಡಿರುವುದು ಕೇವಲ 3,500 ಕೋಟಿ ರು. ಅಷ್ಟೆ. ಇನ್ನೂ ಸುಮಾರು 4000 ಕೋಟಿ ರು.ಗಳನ್ನು ಬಿಡುಗಡೆ ಮಾಡುವುದು ಬಾಕಿ ಇದೆ.

ಇದರ ನಡುವೆಯೇ ಇದೀಗ ಇನ್ನೂ 2,491 ಕೋಟಿ ರು.ಗಳ ಬೃಹತ್ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತಷ್ಟು ಯೋಜನೆಗಳಿಗೆ ಅನು ಮೋದನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ, ಹೊಸದಾಗಿ ಅನುಮೋದಿಸಿರುವ 10 ಯೋಜನೆಗಳು ಯಾವಾಗ ಜಾರಿಯಾಗಬೇಕು, ಯಾವಾಗ ಅಗತ್ಯ ಹಣ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಹೀಗಾಗಿ ಈ ಘೋಷಣೆ ಕೇವಲ ಚುನಾವಣೆ ಗಿಮಿಕ್ ಎಂಬ ಮಾತುಗಳೂ ಕೇಳಿಬರುತ್ತಿವೆ.

ಯಾವ್ಯಾವ ಯೋಜನೆ?: ನಗರದಲ್ಲಿ 80 ಕಿ.ಮೀ. ಉದ್ದದ 43ರಸ್ತೆಗಳ ಮೇಲ್ದರ್ಜೆಗೆ 690 ಕೋಟಿ ರು., 25 ಕಿ.ಮೀ. ಉದ್ದದ 25 ರಸ್ತೆಗಳನ್ನು ಟೆಂಡರ್‌ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಪಡಿಸಲು 250  ಕೋಟಿ ರು., ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 150 ಕೋಟಿ ರು., 200 ಕಿ.ಮೀ. ಉದ್ದದ 82 ರಸ್ತೆಗಳ ಪಾದಚಾರಿ ಮಾರ್ಗ ಅಭಿವೃದ್ಧಿಗೆ 200 ಕೋಟಿ ರು., 9 ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ 421 ಕೋಟಿ ರು., 13 ಕಡೆ ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ 150 ಕೋಟಿ ರು, ಮಳೆ ನೀರುಗಾಲುವೆ ಅಭಿವೃದ್ಧಿಗೆ 100 ಕೋಟಿ ರು., ಸಂಚಾರ ಎಂಜಿನಿಯರಿಂಗ್ ಕಾಮಗಾರಿಗೆ 200 ಕೋಟಿ ರು., ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ 80 ಕೋಟಿ ರು, 1 ಸಾವಿರ ಶೌಚಗೃಹ ನಿರ್ಮಾಣಕ್ಕೆ 50 ಕೋಟಿ ರು. ಸೇರಿ ಒಟ್ಟು 2,491 ಕೋಟಿ ರು. ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

loader