ಬೆಂಗಳೂರು[ಸೆ.26]: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ‘ಕಲ್ಯಾಣ ನಿಧಿ’ಯ ಹಣವನ್ನು ನೆರೆ ಪರಿಹಾರಕ್ಕೆ ಬಳಸಲು ವರ್ಗಾವಣೆ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಎತ್ತಂಗಡಿಯಾಗಿದ್ದಾರೆಂದು ಹೇಳಲಾದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕಡೆಗೂ ರಾಜ್ಯ ಸರ್ಕಾರ ಹುದ್ದೆ ತೋರಿಸಿದೆ.

ಮತ್ತೊಮ್ಮೆ ವಿವಾದಕ್ಕೆ ಕಾರಣವಾದ ರೋಹಿಣಿ ಸಿಂಧೂರಿ ವರ್ಗಾವಣೆ

ಮಂಡಳಿಯ ಕಾರ್ಯದರ್ಶಿ ಹುದ್ದೆಯಿಂದ ರೋಹಿಣಿಯನ್ನು ವರ್ಗಾವಣೆ ಮಾಡಿದ್ದರೂ ಅವರಿಗೆ ಹುದ್ದೆ ನೀಡಿರಲಿಲ್ಲ. ಗುರುವಾರ ಅವರಿಗೆ ರೇಷ್ಮೆ ಅಭಿವೃದ್ಧಿ ಮತ್ತು ರೇಷ್ಮೆ ನಿರ್ದೇಶನಾಲಯದ ಆಯುಕ್ತ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.

ಕಾರ್ಮಿಕರ ಹಿತ ಕಾಯಲು ಮುಂದಾದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ವರ್ಗ!

ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉಳಿದಿರುವ ಹಣವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಉದ್ದೇಶಕ್ಕಾಗಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಸುವ ಉದ್ದೇಶದ ‘ಕಲ್ಯಾಣ ನಿಧಿ’ಯಲ್ಲಿ ಇರುವ ಎಂಟು ಸಾವಿರ ಕೋಟಿ ರು.ಗಳ ಪೈಕಿ ಮೂರು ಸಾವಿರ ಕೋಟಿ ರು.ಗಳನ್ನು ವರ್ಗಾವಣೆ ಮಾಡಲು ಸಿಂಧೂರಿ ಅವರಿಗೆ ಸರ್ಕಾರ ಸೂಚಿಸಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ರೋಹಿಣಿ ಸಿಂಧೂರಿ ಒಪ್ಪದ ಕಾರಣ ಅವರನ್ನು ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿ, ಯಾವುದೇ ಹುದ್ದೆ ತೋರಿಸಿರಲಿಲ್ಲ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಹಾಗೂ ರೋಹಿಣಿ ಪರವಾಗಿ ಪ್ರತಿಭಟನೆ ನಡೆದ ನಂತರ ಎಚ್ಚೆತ್ತ ಸರ್ಕಾರ ಇದೀಗ ರೋಹಿಣಿ ಅವರಿಗೆ ಹುದ್ದೆ ತೋರಿಸಿದೆ.