ಚೆನ್ನೈ (ಅ.01): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯ ವಿಚಾರವು ಈಗ ರಾಷ್ಟ್ರಪತಿ ಭವನದ ಮೆಟ್ಟಿಲೇರಿದೆ. ಜಯಲಲಿತಾ ಆರೋಗ್ಯ ಸ್ಥಿತಿ ಹೇಗಿದೆ ಎಂಬ ವಿವರವನ್ನು ರಾಜ್ಯಪಾಲರಿಂದ ತರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ವಕೀಲ ರೀಗನ್ ಬೆಲ್ ಎಂಬವರು ಮನವಿ ಮಾಡಿದ್ದಾರೆ.
ಜಯಲಲಿತಾ ಆರೋಗ್ಯದ ಬಗ್ಗೆ ಗಾಳಿಮಾತುಗಳೇ ಹರಿದಾಡುತ್ತಿವೆ, ಅವರ ದೇಹಸ್ಥಿತಿಯ ವಿವರವನ್ನು ರಹಸ್ಯವಾಗಿಟ್ಟುಕೊಳ್ಳಲಾಗಿದೆ ಹಾಗೂ ರಾಜ್ಯಪಾಲರು, ಸರ್ಕಾರದ ಸಚಿವರಿಗೂ ಸಿಎಂ ಜಯಲಲಿತಾ ಭೇಟಿ ಸಾಧ್ಯವಾಗುತ್ತಿಲ್ಲ ಎಂದು ರೀಗನ್ ಬೆಲ್ ಹೇಳಿದ್ದಾರೆ.
ಆ ಕಾರಣದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಹತೋಟಿ ತಪ್ಪುತ್ತಿದೆ ಎಂದಿರುವ ರೀಗನ್ ಬೆಲ್, ಗೊಂದಲ ನಿವಾರಣೆಗೆ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರಪತಿ ಭವನಕ್ಕೆ ವಕೀಲ ರೀಗನ್ ಬೆಲ್ ಮನವಿ ಸಲ್ಲಿಸಿದ್ದಾರೆ.
