ವಿಜಯಪುರ[ಜು.28]: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಅವಕಾಶ ನೀಡುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ವಿಜಯಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲ ವಜುಭಾಯಿ ವಾಲಾ ಅವರು ಎಲ್ಲರಿಗೂ ಅರ್ಥವಾಗುವ ರೀತಿ ಸಂವಿಧಾನದ ನಿಯಮ ಉಲ್ಲಂಘಿಸಿದ್ದಾರೆ. ಕರ್ನಾಟಕ ಜನರಿಗೆ ಇದು ನೋವು ತಂದಿದೆ ಎಂದರು.

ಯಡಿಯೂರಪ್ಪನವರು ಸದನದಲ್ಲಿ ಅಗತ್ಯವಿರುವ ಬಹುಮತ ಹೊಂದಿಲ್ಲ. ಅದನ್ನು ಖಾತ್ರಿ ಪಡಿಸಿಕೊಳ್ಳದೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದು ಸರಿಯಲ್ಲ. ಇಷ್ಟುತರಾತುರಿಯಲ್ಲಿ ಅವಕಾಶ ನೀಡುವ ಅಗತ್ಯತೆ ಇರಲಿಲ್ಲ. ಇದು ದೇಶದ ಆರೋಗ್ಯವಂತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಾಗಿದೆ. ರಾಜ್ಯದ ಜನರಿಗೆ ರಾಜ್ಯಪಾಲರು ತಾವು ಕೈಗೊಂಡ ಕ್ರಮದ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು. ಜು.29ರಂದು ವಿಶ್ವಾಸ ಮತವಿದೆ. ನಮ್ಮ ಕೆಲವು ಶಾಸಕರು ಮೋಸ ಮಾಡಿ ಹೋಗಿದ್ದಾರೆ. ಅವರನ್ನು ಆದಷ್ಟುಬೇಗನೆ ಸ್ಪೀಕರ್‌ ಅನರ್ಹಗೊಳಿಸಬೇಕು. ಈಗಾಗಲೇ ಈ ವಿಷಯದಲ್ಲಿ ವಿಳಂಬವಾಗಿದೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಕಾಂಗ್ರೆಸ್‌ ಬೆಂಬಲದೊಂದಿಗೆ ಋುಣಮುಕ್ತ ಕಾಯ್ದೆ ತಂದಿದೆ. ಇದನ್ನು ಸ್ವಾಗತಿಸುತ್ತೇವೆ. ಋುಣಮುಕ್ತ ಕಾಯ್ದೆ ಜಾಹೀರಾತಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ದೂರವಿಟ್ಟಿದ್ದು ಶುದ್ಧ ತಪ್ಪು. ಈ ಅಚಾತುರ್ಯ ಸರಿಪಡಿಸಿಕೊಳ್ಳುವುದು ಸೂಕ್ತ ಎಂದು ಜೆಡಿಎಸ್‌ ಮುಖಂಡರಿಗೆ ಸಲಹೆ ನೀಡಿದರು.