ರಾಜ್ಯ ಸರ್ಕಾರ ಯು ಟರ್ನ್..! ಮಠ, ಮಂದಿರಗಳಿಗೆ ಕೈ ಹಾಕಲ್ಲ

First Published 8, Feb 2018, 11:56 AM IST
Government withdraw a public notification control of mutts
Highlights

ರಾಜ್ಯದ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಾಲಯಗಳ ಮೇಲೆ ಹತೋಟಿ ಸಾಧಿಸಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಬೆಂಗಳೂರು(ಫೆ.08): ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ ಯುಟರ್ನ್ ಹೊಡೆದಿದ್ದು ಮಠ, ಮಂದಿರಗಳಿಗೆ ಕೈ ಹಾಕಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೆ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಸುತ್ತೋಲೆ ಪ್ರಕಟಣೆ ಬಗ್ಗೆ ಸರ್ಕಾರಕ್ಕೆ ಸೂಕ್ತ ಮಾಹಿತಿ ಇರಲಿಲ್ಲ. ಅದನ್ನು ಅಧಿಕಾರಿಗಳು ಹೊರಡಿಸಿದ್ದ ಕಾರಣ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ತಿಳಿಸಿದರು.

ರಾಜ್ಯದ ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಾಲಯಗಳ ಮೇಲೆ ಹತೋಟಿ ಸಾಧಿಸಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು.ಇದು ಭಾರಿ ವಿವಾದ ಹುಟ್ಟುಹಾಕಿದ್ದು, ಪ್ರತಿಪಕ್ಷಗಳು, ಮಠಾಧೀಶರು ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ತನಗೆ ಮಠಗಳನ್ನು ಹತೋಟಿಗೆ ಪಡೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಬಗೆಗೆ ಈ ಹಿಂದೆಯೂ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರ ಈ ಬಾರಿ ಜ.29ರಂದು ಮಠ ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಂಬಂಧ ಸುತ್ತೋಲೆ ಹೊರಡಿಸಿತ್ತು.

ಈ ಸುತ್ತೋಲೆಗೆ ಬುಧವಾರ ಪ್ರತಿಪಕ್ಷಗಳು ಹಾಗೂ ಮಠಾಧಿಪತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಮಠಗಳನ್ನು ಹತೋಟಿಗೆ ತೆಗೆದುಕೊಳ್ಳಲು ಇಂತಹ ಕ್ರಮ ಕೈಗೊಂಡಿದೆ. ಹಿಂದು ಮಠ ಹಾಗೂ ದೇವಾಲಯಗಳನ್ನು ಗುರಿ ಮಾಡಿಕೊಂಡು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

loader