ಈಗಾಗಲೇ ರಾಜ್ಯ ಸರ್ಕಾರ ವಾರ್ಷಿಕವಾಗಿ ಸರ್ಕಾರಿ ನೌಕರರಿಗೆ ಸಂಬಳ ರೂಪದಲ್ಲಿ 25 ಸಾವಿರ ಕೋಟಿ ರುಪಾಯಿ ವಿನಿಯೋಗಿಸಲಾಗುತ್ತಿದೆ- ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ(ನ.24): ಮುಂದಿನ ವರ್ಷ ವೇತನ ಆಯೋಗವನ್ನು ರಚಿಸಿ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯವನ್ನು ಸರಿಪಡಿಸಲಾಗುವುದು, ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಆಧಿವೇಶನದಲ್ಲಿ ವಿಧಾನಪರಿಷತ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ಬಜೆಟ್ ಮಂಡನೆ ವೇಳೆಗಾಗಲೇ ವೇತನ ಆಯೋಗದ ರಚನೆಯ ಕುರಿತಂತೆ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ವಾರ್ಷಿಕವಾಗಿ ಸರ್ಕಾರಿ ನೌಕರರಿಗೆ ಸಂಬಳ ರೂಪದಲ್ಲಿ 25 ಸಾವಿರ ಕೋಟಿ ರುಪಾಯಿ ವಿನಿಯೋಗಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯದ ಕುರಿತಂತೆ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡ ವೇತನ ತಾರತಮ್ಯ ಸರಿಪಡಿಸಲು ಆರೇಳು ವರ್ಷಗಳಿಗೊಮ್ಮೆ ವೇತನವನ್ನು ಹೆಚ್ಚಳ ಮಾಡುತ್ತದೆ. ಈ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.
