ಬೆಂಗಳೂರು (ಆ. 23): ಪ್ರವಾಹಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟಇಳಿಮುಖವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರ ಕ್ರಮ ಕೈಗೊಳ್ಳಲಾರಂಭಿಸಿದೆ.

ವಿಶೇಷವಾಗಿ ಕುಡಿಯುವ ನೀರಿನಿಂದ ಬರುವ ವಿವಿಧ ಬಗೆಯ ಕಾಯಿಲೆಗಳ ತಡೆ, ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿರುವ ಘನತ್ಯಾಜ್ಯಗಳ ವಿಲೇವಾರಿಗೆ ಪ್ರತ್ಯೇಕ ತಂಡ ರಚನೆ, ಕೊಳವೆ ಬಾವಿಗಳಲ್ಲಿನ ನೀರಿನ ಗುಣಮಟ್ಟಪರಿಶೀಲನೆಗೆ ತಜ್ಞರ ತಂಡ ರಚನೆ, ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ಆರೋಗ್ಯ ರಕ್ಷಣೆಗೆ ವೈದ್ಯಕೀಯ ಸಿಬ್ಬಂದಿಗಳ ನಿಯೋಜನೆ ಮಾಡಲಾಗುತ್ತಿದೆ.

ಇನ್ನೆರಡು ದಿನ ರಾಜ್ಯದಲ್ಲಿ ಭಾರಿ ಮಳೆ: 7 ಜಿಲ್ಲೆಯಲ್ಲಿ ಹೈ ಅಲರ್ಟ್‌

ಪ್ರಮುಖವಾಗಿ ಮಲಿನ ನೀರಿನಿಂದ ಬರುವ ಕಾಲರಾ, ಅತಿಸಾರ, ಟೈಫಾಯಿಡ್‌ ಮುಂತಾದ ಕಾಯಿಲೆ ಬರದಂತೆ ನೆರೆಪೀಡಿತ ಪ್ರದೇಶಗಳ ಸಂತ್ರಸ್ತ ಕುಟುಂಬಗಳಿಗೆ ಕ್ಲೋರಿನ್‌ ಮಾತ್ರೆಗಳನ್ನು ನೀಡಲಾಗುತ್ತಿದೆ. ಸಂತ್ರಸ್ತರು ಇಂತಹ ಮಾತ್ರೆಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುದಿಸಿ ಕುಡಿಯುವಂತೆ ಸ್ಥಳೀಯ ಮಟ್ಟದ ಸಿಬ್ಬಂದಿ ಮೂಲಕ ಅರಿವು ಮೂಡಿಸುತ್ತಿದೆ.

ಎನ್‌ಸಿಸಿ, ಎನ್‌ಎಸ್‌ಎಸ್‌ ಕಾರ್ಯಕರ್ತರ ಮೂಲಕ ಕ್ಲೋರಿನ್‌ ಮಾತ್ರೆ ವಿತರಣೆ ಹಾಗೂ ಬೋರಿಕ್‌ ಪೌಡರ್‌ ಸಿಂಪಡಣೆ ಮಾಡಲಾಗುತ್ತಿದೆ. ಜೊತೆಗೆ ಪರಿಹಾರ ಕೇಂದ್ರಗಳಲ್ಲಿ ನೀಡುವ ಕುಡಿಯುವ ನೀರು, ಆಹಾರ ಸಹ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಇರುವ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿನ ನೀರು ಮಲಿನಗೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ ಇವುಗಳ ನೀರನ್ನು ಬಳಸದಂತೆ ಜನರಿಗೆ ತಿಳಿಸಲಾಗಿದೆ. ಇಂತಹ ಬಾವಿಗಳ ನೀರಿನ ಗುಣಮಟ್ಟದ ಬಗ್ಗೆ ತಜ್ಞರ ತಂಡ ಪರಿಶೀಲಿಸಿ ಕುಡಿಯಲು ಯೋಗ್ಯ ಇದೆ ಎಂದು ತಿಳಿಸಿದ ನಂತರವೇ ಅಂತಹ ನೀರನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವರದಿ ನಂತರ ರಾಜ್ಯಕ್ಕೆ ನೆರೆ ಪರಿಹಾರ : ನಿರ್ಮಲಾ

ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ತಂಡ:

ಪ್ರವಾಹದಿಂದ ಸಾವಿರಾರು ಮನೆಗಳು ಪೂರ್ಣ ಇಲ್ಲವೇ ಭಾಗಶಃ ಹಾಳಾಗಿವೆ, ಜೊತೆಗೆ ಗುಡಿಸಲುಗಳು, ಜಾನುವಾರು ಕೊಟ್ಟಿಗೆಗಳು ಸಾಕಷ್ಟುಪ್ರಮಾಣದಲ್ಲಿ ಹಾನಿಯಾಗಿವೆ. ಮನೆಗಳಿಗೆ ನೀರು ನುಗ್ಗಿ ದಿನ ಬಳಕೆಯ ಬಟ್ಟೆ-ಬರೆ, ಹಾಸಿಗೆ, ಹೊದಿಕೆ ಇತ್ಯಾದಿಗಳು ಹಾಳಾಗಿವೆ.

ಈ ರೀತಿ ಹಾನಿಯಾಗಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವ ಸ್ಥಿತಿಯಲ್ಲಿ ಸಂತ್ರಸ್ಥರು ಇಲ್ಲ, ಹೀಗಾಗಿ ಹಾಳಾಗಿರುವ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಪ್ರತ್ಯೇಕ ತಂಡ ರಚಿಸಲಾಗುತ್ತಿದೆ.

ಪ್ರಮಾಣ ಪತ್ರದ ನಂತರವೇ ಶಾಲೆ ಆರಂಭ:

ಸಾವಿರಾರು ಶಾಲೆಗಳು, ಅಂಗನವಾಡಿ ಕೊಠಡಿಗಳು ಪ್ರವಾಹದಿಂದ ಹಾನಿಯಾಗಿವೆ. ಇನ್ನೂ ಹಲವಾರು ಶಾಲೆಗಳು ಹತ್ತಾರು ದಿನಗಳ ಕಾಲ ನೀರಿನಿಂದ ಆವೃತ್ತವಾಗಿರುವುದರಿಂದ ಇಂತಹ ಕಟ್ಟಡಗಳಲ್ಲಿ ತರಗತಿ ಆರಂಭಿಸುವ ಮುನ್ನ ತಜ್ಞರು ಪರಿಶೀಲಿಸಿ ಕಟ್ಟಡದ ಸುರಕ್ಷತೆ ಬಗ್ಗೆ ಪ್ರಮಾಣ ಪತ್ರ ನೀಡಿದ ನಂತರವೇ ಶಾಲೆ ಆರಂಭಿಸಲು ಕಟ್ಟು ನಿಟ್ಟಿನ ಸೂಚನೆಯನ್ನು ನೀಡಲಾಗಿದೆ.

ಇದೇ ವೇಳೆ ಹೆಚ್ಚಿನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಾಣ ಅಥವಾ ಲಭ್ಯವಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲು ಹಾಗೂ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ತಕ್ಷಣಕ್ಕೆ ಪೂರೈಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮನೆ ಹಾನಿ ಪರಿಹಾರಕ್ಕೆ ಆ್ಯಪ್‌ ಬಳಕೆ:

ಮನೆ ಹಾನಿಗೆ ತಕ್ಷಣಕ್ಕೆ ಪರಿಹಾರ ನೀಡಲು ರಾಜೀವ್‌ಗಾಂಧಿ ವಸತಿ ನಿಗಮದ ಆ್ಯಪ್‌ ಬಳಕೆ ಮಾಡಲಾಗುತ್ತಿದೆ. ಸ್ಥಳೀಯ ಗ್ರಾಮ ಲೆಕ್ಕಿಗರು ಇಂತಹ ಆ್ಯಪ್‌ ಮೂಲಕ ಹಾನಿಗೊಳಗಾದ ಮನೆಯ ವಿವಿಧ ಕೋನಗಳ ಚಿತ್ರಣವನ್ನು ಸೆರೆ ಹಿಡಿದು ಸಂಬಂಧಪಟ್ಟವರಿಗೆ ರವಾನಿಸಲಿದ್ದಾರೆ.

ಮನೆಗೆ ಆಗಿರುವ ಹಾನಿಯನ್ನು ನೋಡಿ ಸೂಕ್ತ ಪರಿಹಾರವನ್ನು ಸಂಬಂಧಪಟ್ಟವರ ಖಾತೆಗೆ ಜಮೆ ಮಾಡಲಾಗುತ್ತದೆ. ಶೇ.15ರಿಂದ 25ರಷ್ಟುಹಾನಿಯಾಗಿರುವ ಮನೆಗೆ 25 ಸಾವಿರ ರು. ಶೇ.25ರಿಂದ ಶೇ.75ರಷ್ಟುಹಾನಿಯಾಗಿರುವ ಮನೆಗೆ ಒಂದು ಲಕ್ಷ ರು. ಹಾಗೂ ಪೂರ್ಣ ಹಾನಿಯಾಗಿರುವ ಮನೆಗೆ ಐದು ಲಕ್ಷ ರು. ಪರಿಹಾರ ನೀಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಪ್ರವಾಹ ಎಫೆಕ್ಟ್: ಬೆಳಗಾವಿಯಲ್ಲಿ ಜನರೇಟರ್‌ಗಳಿಗೆ ಭಾರೀ ಬೇಡಿಕೆ

ಡೀಸೆಲ್‌ ಪೂರೈಕೆ:

ಅನೇಕ ಕಡೆ ವಿದ್ಯುತ್‌ ಸಂಪರ್ಕಗಳು ಹಾಳಾಗಿರುವುದರಿಂದ ಬಿಎಸ್‌ಎನ್‌ಎಲ್‌ ಗೋಪುರಗಳು ಕಾರ್ಯನಿರ್ವಹಿಸದ ಕಾರಣ ಮೊಬೈಲ್‌ ದೂರವಾಣಿ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಇಂತಹ ಗೋಪುರಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವವರೆಗೆ ಜನರೇಟರ್‌ನಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತಗಳು ಅಗತ್ಯವಿದ್ದಷ್ಟುಡೀಸೆಲ್‌ ಪೂರೈಕೆ ಮಾಡುತ್ತಿವೆ.

ಶೀಘ್ರದಲ್ಲಿ ಕೇಂದ್ರದಿಂದ ಅಧ್ಯಯನ ತಂಡ:

ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಡಳಿತದಿಂದ ಪಡೆದು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು, ವರದಿ ಸಲ್ಲಿಕೆ ನಂತರ ಕೇಂದ್ರದ ತಜ್ಞರ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ಇದಾದ ನಂತರವೇ ಕೇಂದ್ರ ಸರ್ಕಾರ ಪರಿಹಾರ ನೀಡಲಿದೆ ಎಂದು ಅಧಿಕಾರಿಗಳು ಹೇಳಿದರು.

ಬಾಗಲಕೋಟೆ, ವಿಜಯಪುರಕ್ಕೆ ಒತ್ತು

ಪ್ರವಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಯಾಗಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಕ್ಷಣ ಹಾಗೂ ಶಾಶ್ವತ ಪರಿಹಾರ ಕಾರ್ಯ, ಪುನರ್‌ವಸತಿ ಕಲ್ಪಿಸಲು ಈ ಎರಡು ಜಿಲ್ಲೆಗಳಿಗೆ ಅಪರ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇನ್ನಷ್ಟುಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೊಸದಾಗಿ ನಿರ್ದೇಶಕ ಹುದ್ದೆ ಸೃಷ್ಟಿಸಿ ಐಎಎಸ್‌ ಅಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರನ್ನು ರಾಜ್ಯ ಸರ್ಕಾರ ಇತ್ತೀಚೆಗೆ ನೇಮಕ ಮಾಡಿದೆ.

- ಚಂದ್ರಮೌಳಿ  ಎಂ. ಆರ್