ನವದೆಹಲಿ(ಅ.7): ಎರಡು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳಾದ ಪೆಪ್ಸಿಕೊ ಮತ್ತು ಕೊಕಾಕೊಲಾ ಸಂಸ್ಥೆಗಳು ಉತ್ಪಾದಿಸುವ ತಂಪು ಪಾನೀಯಗಳಲ್ಲಿ ಐದು ರೀತಿಯ ವಿಷಕಾರಿ ಅಂಶಗಳು ಪತ್ತೆಯಾಗಿರುವ ಬಗ್ಗೆ ಸರ್ಕಾರಿ ವರದಿಯೊಂದು ತಿಳಿಸಿರುವುದಾಗಿ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಹೆವಿ ಮೆಟಲ್ಸ್ ಆ್ಯಂಟಿಮನಿ, ಸೀಸ, ಕ್ರೋಮಿಯಂ, ಕ್ಯಾಡಿಯಂ ಮತ್ತು ಡಿಇಎಚ್‌ಪಿ ಕಂಪೌಂಡ್ ಅಥವಾ ಡಿ (2-ಇಥೈಹೆಕ್ಸಿಲ್) ತಾಲೆಟ್ ಮುಂತಾದ ಐದು ಅಂಶಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಆರೋಗ್ಯ ಸಚಿವಾಲಯದ ಔಷಧ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ನಡೆಸಿದ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಸಂಗ್ರಹಿಸಲಾದ ಐದು ತಂಪು ಪಾನೀಯ ಮಾದರಿಗಳಲ್ಲಿ ಈ ಅಂಶಗಳು ಪತ್ತೆಯಾಗಿವೆ. ಪೆಪ್ಸಿ, ಕೋಕಾಕೊಲಾ, ವೌಂಟೇನ್ ಡ್ಯೂ, ಸ್ಪ್ರೈಟ್ ಮತ್ತು ಸೆವೆನ್ ಅಪ್‌ನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ. ವೌಂಟೇನ್ ಡ್ಯೂ, ಸೆವೆನ್ ಅಪ್ ಪೆಪ್ಸಿಕೊ ಕಂಪೆನಿಯ ಉತ್ಪನ್ನಗಳಾದರೆ, ಸ್ಪ್ರೈಟ್ ಕೊಕಾಕೊಲಾ ಕಂಪೆನಿಯ ಉತ್ಪನ್ನವಾಗಿದೆ.

ಫೆಬ್ರವರಿ-ಮಾರ್ಚ್‌ನಲ್ಲಿ ಈ ಪರಿಶೀಲನೆ ನಡೆದಿದೆ. ಡಿಟಿಎಬಿ ನಿರ್ದೇಶನದ ಮೇರೆಗೆ ಆರೋಗ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಕೊಲ್ಕತಾ ಮೂಲದ ಅಖಿಲ ಭಾರತ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ ಈ ಅಧ್ಯಯನ ನಡೆಸಿದೆ. ಕೆಲವು ದಿನಗಳ ಹಿಂದೆ ಈ ಅಧ್ಯಯನ ವರದಿ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕರು ಮತ್ತು ಡಿಟಿಎಬಿ ಅಧ್ಯಕ್ಷ ಜಗದೀಶ್ ಪ್ರಸಾದ್‌ರಿಗೆ ಸಲ್ಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಪ್ಸಿಕೊ ಇಂಡಿಯಾ ವಕ್ತಾರ, ಅಧ್ಯಯನ ವರದಿಯ ಪ್ರತಿಗಳು ಅಥವಾ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಈ ಅಧ್ಯಯನ ಯಾವ ಆಧಾರದಲ್ಲಿ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದು ಅಸಾಧ್ಯ ಎಂದು ಹೇಳಿದ್ದಾರೆ.