ಬೆಂಗಳೂರು (ಏ. 07): ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 2019​​- 20ನೇ ಸಾಲಿನಲ್ಲಿ ‘ಬ್ರ್ಯಾಡೆಂಡ್‌ ಶೂ’ಗಳು ದೊರೆಯಲಿವೆ.

1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಒಂದು ಜತೆ ಶೂ ಮತ್ತು ಎರಡು ಜತೆ ಕಾಲುಚೀಲ (ಸಾಕ್ಸ್‌) ಗಳನ್ನು ನೀಡುವಂತೆ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಶೂ, ಸಾಕ್ಸ್‌ ವಿತರಣೆಯನ್ನು ಜೂ.30ರೊಳಗೆ ಪೂರ್ಣಗೊಳಿಸಬೇಕು. ಜು.15ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಹಿಂದಿನ ವರ್ಷಗಳಲ್ಲಿ ಕಳಪೆ ಹಾಗೂ ನಕಲಿ ಬ್ರ್ಯಾಂಡ್‌ ಶೂ ನೀಡಿದ್ದ ಬಗ್ಗೆ ಸಾಕಷ್ಟುದೂರುಗಳು ಬಂದಿದ್ದವು. ಆದ್ದರಿಂದ ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಹೆಸರಾಂತ ಸಂಸ್ಥೆಗಳಾಗಿರುವ ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಪ್ಯಾರಗಾನ್‌, ಕರೋನ, ಆಕ್ಷನ್‌, ಲಕಾನಿಯಂತಹ ಕಂಪನಿಗಳ ಬ್ರ್ಯಾಂಡೆಡ್‌ ಶೂಗಳನ್ನೇ ನೀಡುವಂತೆ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರಿಗೆ ತಿಳಿಸಿದೆ.

ಶೂ ಮತ್ತು ಸಾಕ್ಸ್‌ ಖರೀದಿಗೆ ಬೆಲೆ ನಿಗದಿ

ತರಗತಿ                        ಬೆಲೆ

1ರಿಂದ 5ನೇ ತರಗತಿ      265 ರು.

6ರಿಂದ 8ನೇ ತರಗತಿ      295 ರು.

9ರಿಂದ 10ನೇ ತರಗತಿ    325 ರು.

ಎಸ್‌ಡಿಎಂಸಿ ಅಧ್ಯಕ್ಷರು ವಿದ್ಯಾರ್ಥಿಗಳ ಪಾದದ ಅಳತೆ ಪಡೆದು ಕಪ್ಪು ಶೂ ಮತ್ತು ಬಿಳಿ ಸಾಕ್ಸ್‌ಗಳನ್ನು ನೀಡಬೇಕು. ವಾತಾವರಣದ ಅಗತ್ಯಕ್ಕೆ ಅನುಗುಣವಾಗಿ ಶೂ ಬದಲು ಚಪ್ಪಲಿಗಳನ್ನು ಖರೀದಿಸಬಹುದಾಗಿದೆ. ಶೂ ಮತ್ತು ಸಾಕ್ಸ್‌ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್‌ಡಿಎಂಸಿಯು ಒಂದು ಅನುಮೋದಿತ ಸಮಿತಿಯನ್ನು ರಚಿಸಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕಿದೆ ಎಂದು ತಿಳಿಸಿದೆ.

ನೋಂದಾಯಿತ ಕಂಪನಿ:

ವಾಣಿಜ್ಯ ಇಲಾಖೆಯಲ್ಲಿ ನೋಂದಾಯಿತ ಮೂರು ಕಂಪನಿಗಳಿಂದ ದರ ಪಟ್ಟಿಯನ್ನು ಪಡೆಯಬೇಕು. ಪಾಲಿವಿನೈಲ್‌ ಕೋಟೆಡ್‌ ವಿಸ್ಕೋಸ್‌ ಕಾಟ್‌ ಫ್ಯಾಬ್ರಿಕ್‌ ಹೊಂದಿದ ಶೂಗಳನ್ನು ಖರೀದಿಸಬೇಕು. ಪ್ರತಿಯೊಂದು ತಾಲೂಕಿನಲ್ಲಿ ಕನಿಷ್ಠ ಶೇ.5 ಶಾಲೆಗಳಲ್ಲಿ ಶೂ ಮತ್ತು ಸಾಕ್ಸ್‌ ಗುಣಮಟ್ಟವನ್ನು ದಿಢೀರ್‌ ಆಗಿ ಅಲ್ಲಲ್ಲಿ ಪರೀಕ್ಷಿಸಲು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ (ಸಿಇಒ)ರು ಸಮಿತಿ ರಚನೆ ಮಾಡಬೇಕು.

ಕಳಪೆ ಗುಣಮಟ್ಟದ ಶೂ ಅಥವಾ ಸಾಕ್ಸ್‌ಗಳ ಬಗ್ಗೆ ದೂರು ಬಂದಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಬಿಇಒ, ಡಿಡಿಪಿಐಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಇಲಾಖೆಯು ಎಚ್ಚರಿಕೆ ನೀಡಿದೆ.