ನಷ್ಟದಲ್ಲಿರುವ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸದ್ಯದ ಮಟ್ಟಿಗೆ ತಡೆಹಿಡಿದಿದೆ. ಚುನಾವಣಾ ವರ್ಷದಲ್ಲಿ ಮಾರಾಟ ಪ್ರಕ್ರಿಯೆ ಬೇಡ ಎಂದು ನಿರ್ಧರಿಸಿರುವ ಕೇಂದ್ರ ಸರ್ಕಾರ, ಕಂಪನಿಯಕಾರ್ಯನಿರ್ವಹಣೆಗೆ ಅಗತ್ಯ ಹಣ ನೀಡುವ  ಭರವಸೆ ನೀಡಿದೆ ಎಂದು ತಿಳಿದುಬಂದಿದೆ

ನವದೆಹಲಿ (ಜೂ. 20): ನಷ್ಟದಲ್ಲಿರುವ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸದ್ಯದ ಮಟ್ಟಿಗೆ ತಡೆಹಿಡಿದಿದೆ. ಚುನಾವಣಾ ವರ್ಷದಲ್ಲಿ ಮಾರಾಟ ಪ್ರಕ್ರಿಯೆ ಬೇಡ ಎಂದು ನಿರ್ಧರಿಸಿರುವ ಕೇಂದ್ರ ಸರ್ಕಾರ, ಕಂಪನಿಯ ಕಾರ್ಯನಿರ್ವಹಣೆಗೆ ಅಗತ್ಯ ಹಣ ನೀಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಮೇ ಅಂತ್ಯದವರೆಗೆ ಏರ್ ಇಂಡಿಯಾ ಮಾರಾಟ ಬಿಡ್ಡಿಂಗ್‌ಗೆ ಅವಕಾಶವಿತ್ತು. ಆದರೆ ಯಾರೂ ಕೂಡ ಈ ‘ಬಿಳಿಯಾನೆ’ಯನ್ನು ಖರೀದಿಸಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದು, ಸೋಮವಾರ ನಡೆದ ಸಭೆಯಲ್ಲಿ ಸದ್ಯದ ಮಟ್ಟಿಗೆ ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಪ್ರಭಾರಿ ವಿತ್ತ ಸಚಿವ ಪೀಯೂಶ್ ಗೋಯಲ್, ವಿಮಾನಯಾನ ಸಚಿವ ಸುರೇಶ್ ಪ್ರಭು, ಸಾರಿಗೆ ಸಚಿವ ಗಡ್ಕರಿ ಅವರನ್ನೊಳಗೊಂಡ ಸಭೆಯಲ್ಲಿ ಸೋಮವಾರ ಈ ಬಗ್ಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಯಿತು.