ಶ್ರೀನಗರ[ಆ.17]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಹಾಗೂ 35(ಎ) ಪರಿಚ್ಛೇದ ರದ್ದು ಮಾಡುವ ನಿರ್ಣಯ ಘೋಷಣೆ ಬಳಿಕ ಸ್ಥಗಿತಗೊಳಿಸಲಾಗಿರುವ ದೂರವಾಣಿ ಸೇವೆ ವಾರಾಂತ್ಯದಿಂದ ಆರಂಭವಾಗಲಿದೆ. 12 ದಿನದ ಬಳಿಕ ಶುಕ್ರವಾರದಿಂದ ಸರ್ಕಾರಿ ಕಚೇರಿಗಳು ಪುನಾರಂಭವಾಗಿವೆ. ಸೋಮವಾರದಿಂದ ಶಾಲಾ- ಕಾಲೇಜುಗಳು ಆರಂಭವಾಗಲಿವೆ. ಸಾರ್ವಜನಿಕರ ಓಡಾಟದ ಮೇಲಿನ ನಿರ್ಬಂಧವೂ ಹಂತ-ಹಂತವಾಗಿ ತೆರವು ಮಾಡಿ, ಸಾರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಮ್ಮು-ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ.ವಿ. ಆರ್‌. ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

‘ಆ.5ರಿಂದ ಜಮ್ಮು-ಕಾಶ್ಮೀರದಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಈ ಅವಧಿಯಲ್ಲಿ ದೊಂಬಿ, ಕಲ್ಲು ತೂರಾಟ ಅಥವಾ ಗಲಾಟೆಗಳಲ್ಲಿ ಪ್ರಾಣಾಪಾಯ ಅಥವಾ ಗಾಯಗಳಾದ ಘಟನೆಗಳು ವರದಿಯಾಗಿಲ್ಲ. ಅಲ್ಲದೆ, ಶುಕ್ರವಾರ ಕಣಿವೆ ರಾಜ್ಯ ಸಂಪೂರ್ಣ ಶಾಂತಿಯುತವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ದ್ವಿಗುಣಗೊಂಡಿದೆ’ ಎಂದರು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಿಷೇಧಾಜ್ಞೆಯಲ್ಲಿ ಸಡಿಲಿಕೆ ಮಾಡಲಾಗುತ್ತದೆ. ಜೊತೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಪರಿಗಣಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನು ಭಯೋತ್ಪಾದಕ ಸಂಘಟನೆಗಳು ಮೊಬೈಲ್‌ ಸಂಪರ್ಕದ ಮೂಲಕ ಉಗ್ರ ಕೃತ್ಯಕ್ಕೆ ಮುಂದಾಗುತ್ತವೆ ಎಂಬ ನಿಟ್ಟಿನಲ್ಲಿ ಟೆಲಿಕಾಂ ಸಂಪರ್ಕವನ್ನು ಹಂತ-ಹಂತವಾಗಿ ಪುನಾರಂಭಿಸಲಾಗುತ್ತಿದೆ ಎಂದು ಹೇಳಿದರು.

ಕಾಶ್ಮೀರ ವಿಶೇಷಾಧಿಕಾರ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಬೇಕೆಂಬ ಭಯೋತ್ಪಾದಕರ ಸಂಘಟನೆಗಳು, ಮೂಲಭೂತವಾದಿ ಗುಂಪುಗಳು ಹಾಗೂ ಪಾಕಿಸ್ತಾನಗಳ ಯತ್ನದ ಹೊರತಾಗಿಯೂ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಆ.5ರಂದು ಗೃಹ ಸಚಿವ ಅಮಿತ್‌ ಶಾ ಅವರು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಜಮ್ಮು-ಕಾಶ್ಮೀರವನ್ನು ಲಡಾಖ್‌ ಹಾಗೂ ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ನಿರ್ಣಯ ಪ್ರಕಟಿಸಿದ ಕಳೆದ 11 ದಿನಗಳಿಂದಲೂ ಜಮ್ಮು-ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಿದೆ.