ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬಗೆಯ ಇಂಧನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಪರಿಧಿಗೆ ತರಬೇಕು ಎಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ.  

ನವದೆಹಲಿ : ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬಗೆಯ ಇಂಧನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಪರಿಧಿಗೆ ತರಬೇಕು ಎಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ. ಹಾಗೊಂದು ವೇಳೆ, ಈ ಎರಡೂ ಇಂಧನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೂ ಬೆಲೆ ಹಾಗೂ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸವಾಗದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಎಸ್‌ಟಿಯಲ್ಲಿ ಶೇ.5, ಶೇ.12, ಶೇ.18 ಹಾಗೂ ಶೇ.28 ಎಂಬ ನಾಲ್ಕು ತೆರಿಗೆಗಳು ಇವೆ. ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಶೇ.28ರ ಜಿಎಸ್‌ಟಿ ಸ್ಲಾ್ಯಬ್‌ಗೆ ತಂದರೂ ಅದರ ಜತೆಗೆ ಮಾರಾಟ ತೆರಿಗೆ ಅಥವಾ ವ್ಯಾಟ್‌ ಹೇರುವ ಅವಕಾಶ ರಾಜ್ಯಗಳಿಗೆ ಇದ್ದೇ ಇರುತ್ತದೆ. ಏಕೆಂದರೆ ಪೆಟ್ರೋಲ್‌, ಡೀಸೆಲ್‌ ಮೇಲೆ ವಿಶ್ವದ ಯಾವುದೇ ದೇಶದಲ್ಲಿ ಕೇವಲ ಜಿಎಸ್‌ಟಿಯೊಂದನ್ನೇ ವಿಧಿಸುವ ಪದ್ಧತಿ ಇಲ್ಲ. ಹೀಗಾಗಿ ಭಾರತದಲ್ಲೂ ಜಿಎಸ್‌ಟಿ ಹಾಗೂ ವ್ಯಾಟ್‌ ಎರಡನ್ನೂ ಹೇರುವ ಪ್ರಸ್ತಾಪವಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್‌ಗೆ ಜಿಎಸ್‌ಟಿ ವಿಸ್ತರಣೆಯಾದರೂ ಈಗಿನ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಜಾರಿಯಿಂದ 20 ಸಾವಿರ ಕೋಟಿ ರು. ಆದಾಯ ಕೈತಪ್ಪಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌, ನೈಸರ್ಗಿಕ ಅನಿಲ, ಜೆಟ್‌ ಇಂಧನ ಹಾಗೂ ಕಚ್ಚಾ ತೈಲಗಳನ್ನು ಜಿಎಸ್‌ಟಿಯಿಂದ ಹೊರಗಿಟ್ಟಿರುವುದರಿಂದ ಸರ್ಕಾರಕ್ಕೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ನೀಡಬೇಕಾದ ಪ್ರಮೇಯವಿಲ್ಲ. ಜಿಎಸ್‌ಟಿಯನ್ನು ವಿಸ್ತರಿಸಿದರೆ ಇನ್‌ಪುಟ್‌ ಕ್ರೆಡಿಟ್‌ ರೂಪದಲ್ಲಿ 20 ಸಾವಿರ ಕೋಟಿ ರು. ಖೋತಾ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಜಿಎಸ್‌ಟಿಯಲ್ಲಿ ಗರಿಷ್ಠ ತೆರಿಗೆ ದರವೇ ಶೇ.28. ಅಷ್ಟನ್ನು ಮಾತ್ರವೇ ವಿಧಿಸಿದರೆ ರಾಜ್ಯಗಳಿಗೆ ಆದಾಯ ಖೋತಾ ಆಗುತ್ತದೆ. ಅದನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕಾಗುತ್ತದೆ. ಇದರಿಂದ ಪಾರಾಗಲು ಜಿಎಸ್‌ಟಿ ಮೇಲೆ ವ್ಯಾಟ್‌ ವಿಧಿಸುವ ಅವಕಾಶವನ್ನು ರಾಜ್ಯಗಳಿಗೆ ನೀಡಲು ಉದ್ದೇಶಿಸಿದೆ ಎನ್ನಲಾಗಿದೆ.