ಬೆಂಗಳೂರು :  ಏರುತ್ತಿದ್ದ ಪೆಟ್ರೋಲ್‌, ಡೀಸೆಲ್‌ ದರದ ಭಾರ ತಗ್ಗಿಸಲು, ಪ್ರತಿ ಲೀಟರ್‌ಗೆ ಶೇ.2ರಷ್ಟುತೆರಿಗೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ತೆರಿಗೆ ದರವನ್ನು ಹೆಚ್ಚಳ ಮಾಡುವ ಮೂಲಕ ಹೊಸ ವರ್ಷದ ಹೊಸ್ತಿಲಲ್ಲಿ ಜನಸಾಮಾನ್ಯರಿಗೆ ಶಾಕ್‌ ನೀಡಿದೆ. ಈ ನಿರ್ಧಾರದಿಂದ ಪೆಟ್ರೋಲ್‌ ದರದಲ್ಲಿ ಲೀಟರ್‌ಗೆ 1.83 ರು. ಮತ್ತು ಡೀಸೆಲ್‌ ದರದಲ್ಲಿ 1.86 ರು. ಹೆಚ್ಚಳವಾಗಿದೆ.

ಪೆಟ್ರೋಲ್‌ ಮೇಲೆ ಈ ಹಿಂದೆ ಇದ್ದ ಶೇ.21ರಷ್ಟುತೆರಿಗೆಯನ್ನು ಶೇ.32ಕ್ಕೆ ಮತ್ತು ಡೀಸೆಲ್‌ ಮೇಲೆ ಇದ್ದ ಶೇ.17.73ರಷ್ಟುತೆರಿಗೆಯನ್ನು ಶೇ.28.75ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರವು ಶುಕ್ರವಾರ ಆದೇಶ ಹೊರಡಿಸಿದೆ.

ಸರ್ಕಾರದ ಈ ಆದೇಶದಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 70.84 ರು. ಮತ್ತು ಡೀಸೆಲ್‌ಗೆ 64.66 ರು. ಆಗಲಿದೆ. ಈ ದರವು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಆದರೆ, ದರವನ್ನು ಹೆಚ್ಚಳ ಮಾಡಿದರೂ ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಪೆಟ್ರೋಲ್‌, ಡಿಸೇಲ್‌ ಮಾರಾಟದ ಬೆಲೆಯು ಕಡಿಮೆ ಇದೆ ಎಂದು ಸರ್ಕಾರವು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಕಡಿತ ಮಾಡಿದ್ದ ಸೆಸ್‌ ಹೆಚ್ಚಳ:

ಪೆಟ್ರೋಲ್‌ ದರ ಹೆಚ್ಚಳವಾಗುತ್ತಿದ್ದಂತೆ ಸೆಸ್‌ ಕಡಿಮೆ ಮಾಡಲಾಗಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗುತ್ತಿದ್ದ ರಾಜಸ್ವ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಸರಿದೂಗಿಸಲು ತೆರಿಗೆ ಹೆಚ್ಚಳ ಮಾಡಿದೆ.

ವಿಚಿತ್ರವೆಂದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪೆಟ್ರೋಲ್‌-ಡಿಸೇಲ್‌ ಬೆಲೆ ಏರಿಕೆ ಖಂಡಿಸಿ ಬೀದಿಗಿಳಿದಿದ್ದ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು, ಇದೀಗ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಶಾಕ್‌ ನೀಡಿವೆ.

2018ರ ಜು.15ರಂದು ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ದರವನ್ನು ಕ್ರಮವಾಗಿ ಶೇ.30ರಿಂದ ಶೇ.32 ಮತ್ತು ಶೇ. 19ರಿಂದ ಶೇ.21ಕ್ಕೆ ಹೆಚ್ಚಳ ಮಾಡಲಾಗಿತ್ತು. ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಮೊತ್ತವನ್ನು ತಲಾ ಲೀಟರ್‌ಗೆ 1.14 ರು. ಮತ್ತು 1.12 ರು. ಹೆಚ್ಚುವರಿ ಸಂಗ್ರಹಣೆ ಮಾಡಲಾಗುತ್ತಿತ್ತು. ಬಳಿಕ ಸತತವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೂಲ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಿ ಗ್ರಾಹಕರಿಗೆ ತೆರಿಗೆ ಭಾರವನ್ನು ಕಡಿಮೆ ಮಾಡುವ ದೃಷ್ಟಿಯಿಂದ 2018ರ ಸೆ.17ರಂದು ಪೆಟ್ರೋಲ್‌, ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ ಸಂಗ್ರಹವಾಗುತ್ತಿದ್ದ ತೆರಿಗೆ ಮೊತ್ತವನ್ನು ಶೇ.2ರಷ್ಟುಕಡಿಮೆ ಮಾಡಲಾಗಿತ್ತು. ಪರಿಣಾಮ ಪೆಟ್ರೋಲ್‌ ಮೇಲಿನ ತೆರಿಗೆ ದರವು ಶೇ.32ರಿಂದ ಶೇ.28.75 ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.21ರಿಂದ ಶೇ.17.73ರಷ್ಟುಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಕಳೆದ ಎರಡೂವರೆ ತಿಂಗಳನಿಂದ ಸತತವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಇಳಿಕೆಯಾಗುತ್ತಿದೆ. ಹೀಗಾಗಿ ಪೆಟ್ರೋಲ್‌ ಮತ್ತು ಡಿಸೇಲ್‌ ಮೂಲ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಇದು ರಾಜ್ಯದ ರಾಜಸ್ವ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲಿನ ತೆರಿಗೆ ದರವನ್ನು ಈ ಮೊದಲಿನಂತೆ ಶೇ.32 ಮತ್ತು ಶೇ.21ಕ್ಕೆ ಪರಿಷ್ಕರಿಸಲಾಗಿದೆ.