ನವದೆಹಲಿ[ಮೇ.17]: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ‘ಭಯೋತ್ಪಾದಕರನ್ನು ಹುಡುಕಿ ಹೊಡೆಯುವ’ ಕಾರ್ಯಾಚರಣೆಯನ್ನು ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ತಿಂಗಳಿನಲ್ಲಿ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಇದು ಷರತ್ತಿನ ನಿರ್ಧಾರವಾಗಿದ್ದು, ಉಗ್ರರು ದಾಳಿ ನಡೆಸಿದರೆ ಅಥವಾ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದರೆ ಅವರ ಮೇಲೆ ಪ್ರತಿ ದಾಳಿ ನಡೆಸುವ ಅಧಿಕಾರವನ್ನು ಸೇನಾಪಡೆಗೆ ನೀಡಿದೆ.

ಕೆಲ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದ ಮನೆಗಳಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ಹೊರಗೆಳೆಯುವ ಹಾಗೂ ಶರಣಾಗದಿದ್ದರೆ ಗುಂಡು ಹಾರಿಸಿ ಹತ್ಯೆಗೈಯುವ ಕಠಿಣ ಕಾರ್ಯಾಚರಣೆಯನ್ನು ಸೇನಾಪಡೆ ನಡೆಸುತ್ತಿದೆ. ಈ ಗುರುವಾರ ಅಥವಾ ಶುಕ್ರವಾರ ಆರಂಭವಾಗುವ ರಂಜಾನ್ ತಿಂಗಳಿನಲ್ಲಿ ಹಾಗೂ ಅಮರನಾಥ ಯಾತ್ರೆಯ ವೇಳೆ ಇದಕ್ಕೆ ಏಕಪಕ್ಷೀಯ ಕದನ ವಿರಾಮ ಘೋಷಿಸಬೇಕು ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಜಮ್ಮು ಕಾಶ್ಮೀರದ ಸರ್ಕಾರದಲ್ಲಿ ಪಾಲುದಾರನಾಗಿರುವ ಬಿಜೆಪಿ ಘಟಕವೇ ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಕೇಂದ್ರ ಸರ್ಕಾರವು ಕದನ ವಿರಾಮ ಘೋಷಿಸುವ ನಿರ್ಧಾರವನ್ನು ಪ್ರಕಟಿಸಿದೆ.

‘ಶಾಂತಿಯನ್ನು ಬಯಸುವ ಮುಸ್ಲಿಮರಿಗೆ ಶಾಂತಿಯುತವಾಗಿ ರಂಜಾನ್ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂಬ ದೃಷ್ಟಿಯಿಂದ ಸೇನಾಪಡೆಯು ಸ್ವಯಂಪ್ರೇರಿತವಾಗಿ ಮನೆಗಳಲ್ಲಿ ಶೋಧ ನಡೆಸಿ ಉಗ್ರರನ್ನು ಹಿಡಿಯುವ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ’ ಎಂದು ಗೃಹ ಇಲಾಖೆಯ ವಕ್ತಾರರು ಜಮ್ಮು ಕಾಶ್ಮೀರ ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ, ಉಗ್ರರು ದಾಳಿ ನಡೆಸಿದರೆ ಅಥವಾ ಅವರು ಮನೆಗಳಲ್ಲಿ ಅಡಗಿರುವ ಬಗ್ಗೆ ಸೇನಾಪಡೆಗೆ ನಿರ್ದಿಷ್ಟ ಮಾಹಿತಿ ದೊರೆತರೆ ಅವರನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಿದೆ ಎಂದೂ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಹಿಂದೆ 2000ನೇ ಇಸ್ವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಹಿಡಿಯಲು ಇದೇ ಮಾದರಿಯ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಆದರೆ, ರಂಜಾನ್ ತಿಂಗಳಿನಲ್ಲಿ ವಾಜಪೇಯಿ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿ ಶಾಂತಿಪ್ರಿಯ ಮುಸ್ಲಿಮರ ಮೆಚ್ಚುಗೆಗೆ ಪಾತ್ರವಾಗಿದ್ದರು.