ವಿವಿಧ ಸಚಿವಾಲಯಗಳು ಸಂಗ್ರಹಿಸಿರುವ ನಾಗರಿಕರ ವೈಯುಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆ ವಿವರಗಳು ಸೋರಿಕೆಯಾಗಿದ್ದು, ಇಂಟರ್ನೆಟ್'ನಲ್ಲಿ ಸರಳವಾಗಿ ಲಭ್ಯವಿದೆಯೆಂದು ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿ ಅರ್ಚನಾ ದುರೇಜಾ ಮಾ.25ರಂದು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ಚೆನ್ನೈ (ಮಾ.31): ನೀವು ಆಧಾರ್ ಕಾರ್ಡ್ ಹೊಂದಿದ್ದು, ವಿಶಿಷ್ಟ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿರುವಿರಾದರೆ, ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಮಾಡಿರುವ ವರದಿಯ ಪ್ರಕಾರ ನಿಮ್ಮ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಗಳಿವೆ.
ವರದಿಯ ಪ್ರಕಾರ ಕೇಂದ್ರ ಸರ್ಕಾರವು ಮೊದಲ ಬಾರಿಗೆ ನಾಗರಿಕರ ವೈಯುಕ್ತಿಕ ಹಾಗೂ ಸೂಕ್ಷ್ಮ ಆಧಾರ್ ಮಾಹಿತಿ ಸೋರಿಕೆಯಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.
ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ಬರೆದಿರುವ ಪತ್ರದಿಂದ ನಾಗರಿಕರ ವೈಯುಕ್ತಿಕ ಹಾಗೂ ಸೂಕ್ಷ ಮಾಹಿತಿಯು ಸೋರಿಕೆಯಾಗಿರುವುದು ಧೃಢಪಟ್ಟಿದೆ.
ವಿವಿಧ ಸಚಿವಾಲಯಗಳು ಸಂಗ್ರಹಿಸಿರುವ ನಾಗರಿಕರ ವೈಯುಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆ ವಿವರಗಳು ಸೋರಿಕೆಯಾಗಿದ್ದು, ಇಂಟರ್ನೆಟ್'ನಲ್ಲಿ ಸರಳವಾಗಿ ಲಭ್ಯವಿದೆಯೆಂದು ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿ ಅರ್ಚನಾ ದುರೇಜಾ ಮಾ.25ರಂದು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ಮುಂದುವರಿದು, ಮಾಹಿತಿ ಸೋರಿಕೆಯು ಗಂಭೀರ ಲೋಪವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ವ್ಯಕ್ತಿಯ ಹೆಸರಿನೊಂದಿಗೆ ಆಧಾರ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ, ಮುಂತಾದ ವಿವರಗಳನ್ನು ಬಹಿರಂಗಪಡಿಸುವುದು ಆಧಾರ್ ಕಾಯ್ದೆ-2016ಯ ುಲ್ಲಂಘನೆಯಾಗಿದೆಯಲ್ಲದೇ, 3 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ, ಎಂದು ಅವರು ಹೇಳಿದ್ದಾರೆ.
ನಿಯಮವನ್ನು ಉಲ್ಲಂಘಿಸಿದವರು ಸಂತ್ರಸ್ತ ವ್ಯಕ್ತಿಗೆ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಹೇಳಿರುವ ಅವರು, ಇಲಾಖೆಗಳಿಗೆ ಹಾಗೂ ರಾಜ್ಯ ಸರ್ಕಾರಗಳಿಗೆ ಕೂಡಲೇ ಮಾಹಿತಿ ಬಹಿರಂಗಪಡಿಸುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಆದರೆ, ಆಧಾರ್ ಪ್ರಾಧಿಕಾರದ ಬಳಿ ಇರುವ ವ್ಯಕ್ತಿಗಳ ಖಾಸಗಿ ಹಾಗೂ ಇತರ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿದೆಯೆಂದು ಇದೇ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ಕಳೆದ ಮಾ.5ರಂದು ಹೇಳಿಕೆ ನೀಡಿತ್ತು.
ಮಾಹಿತಿ ಸೋರಿಕೆ, ಬಯೋಮೆಟ್ರಿಕ್'ಗಳ ದುರ್ಬಳಕೆ, ಖಾಸಗಿತನದ ಉಲ್ಲಂಘನೆ ಅಥವಾ ಪರ್ಯಾಯ ಡೇಟಾಬೇಸ್'ಗಳು ರಚನೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಆಧಾರ್ ಪ್ರಾಧಿಕಾರವು ಕೂಡಾ ನಿರಾಕರಿತ್ತು.
ಆದಾಯ ತೆರಿಗೆ ಪಾವತಿ ಸೇರಿದಂತೆ ಇತರ ಎಲ್ಲಾ ಸೇವೆಗಳಿಗೆ ಆಧಾರ್ ಕಾರ್ಡ್ ಹೇರಿಕೆಯನ್ನು ಹಾಗೂ ಮಾಹಿತಿ ಸುರಕ್ಷತೆಗೆ ಸಂಬಂಧಪಟ್ಟಂತೆ ನಾಗರಿಕ ಗುಂಪುಗಳು ಕಳವಳ ವ್ಯಕ್ತಪಡಿಸುತ್ತಲೇ ಬಂದಿವೆ.
