ಬಿಜೆಪಿ ಸೋಲಿಸಲು ಗೌರಿ ವೇದಿಕೆ ಪಣ

First Published 30, Jan 2018, 7:31 AM IST
Gouri Lankesh Vedike Attack BJp
Highlights

ನಾಲ್ಕು ತಿಂಗಳ ಹಿಂದೆ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನ ಪ್ರಯುಕ್ತ ರಾಜಧಾನಿಯಲ್ಲಿ ಸೋಮವಾರ ನಡೆದ ಕಾರ್ಯ ಕ್ರಮ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧದ ಸ್ವರೂಪ ಪಡೆಯಿತು. ಬಹುತೇಕ ಪ್ರಗತಿಪರ ಹೋರಾಟಗಾರರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದರು

ಬೆಂಗಳೂರು : ನಾಲ್ಕು ತಿಂಗಳ ಹಿಂದೆ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನ ಪ್ರಯುಕ್ತ ರಾಜಧಾನಿಯಲ್ಲಿ ಸೋಮವಾರ ನಡೆದ ಕಾರ್ಯ ಕ್ರಮ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧದ ಸ್ವರೂಪ ಪಡೆಯಿತು. ಬಹುತೇಕ ಪ್ರಗತಿಪರ ಹೋರಾಟಗಾರರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದರು.

ರಾಜ್ಯದಲ್ಲಿ ಮೋದಿ ಶಕ್ತಿಯನ್ನು ಹಿಮ್ಮೆಟ್ಟಿಸಿ, ಜಾತ್ಯತೀತ ಹಾಗೂ ಪ್ರಗತಿಪರ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಎಲ್ಲ ಜನಪರ ಮತ್ತು ಜೀವಪರ ಸಂಘಟನೆಗಳು ಹಾಗೂ ಜಾತ್ಯತೀತ ರಾಜಕೀಯ ಪಕ್ಷಗಳು ಒಕ್ಕೊರಲಿನ ಹೋರಾಟ ನಡೆಸಬೇಕು ಎಂದು ಹಲವಾರು ಪ್ರಗತಿಪರ ಹೋರಾಟ ಗಾರರು ಅಭಿಪ್ರಾಯಪಟ್ಟರು.

ಗುಜರಾತ್‌ನ ಸಾಮಾಜಿಕ ಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ‘ಬಿಜೆಪಿಯ ಬಾಲಕರೇ, ಮೋದಿ-ಶಾಗೇ ನಾವು ಹೆದರಿಲ್ಲ, ನಿಮ್ಮ ದೀಡ ಪಂಡಿತ್ ಎಫ್‌ಐಆರ್‌ಗೆ ಹೆದರುತ್ತೀವಾ? ದೇಶದಲ್ಲಿ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಜೀವಪರ ಜನರು ಒಟ್ಟಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಶಕ್ತಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಅದಕ್ಕಾಗಿ ಏಪ್ರಿಲ್ ತಿಂಗಳ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ’ ಎಂದು ಘೋಷಿಸಿದರು.

ಕರ್ನಾಟಕದಲ್ಲಿರುವ 20 ಪ್ರತಿಶತ ದಲಿತರಲ್ಲಿ 20 ಮತಗಳೂ ಬಿಜೆಪಿಗೆ ಬೀಳಬಾರದು. ಅಂಬಾನಿ, ಅದಾನಿಗೆ 30 ಸಾವಿರ ಕೋಟಿ ರು. ಸಬ್ಸಿಡಿ ನೀಡಿದವರು ಉಮ್ನಾ ಸಂತ್ರಸ್ತರಿಗೆ ಐದು ಎಕರೆ ಜಮೀನು ನೀಡಿಲ್ಲ. ರೋಹಿತ್ ವೇಮುಲನಿಂದ ಆರಂಭವಾದ ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಕೋರೆಗಾಂವ್ ವರೆಗೂ ಮುಂದುವರಿದಿದೆ. ನಮ್ಮ ವಿರುದ್ಧ ನಾವು ಹೋದಲ್ಲೆಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಹೀಗಾಗಿ ಕರ್ನಾಟಕದ ನಾಗರಿಕ ಸಮಾಜ ಹಾಗೂ ಜೀವಪರ ಸಂಘಟನೆಗಳು ಒಂದಾಗಿ ಜಾತ್ಯತೀತ ಪಕ್ಷಗಳೊಂದಿಗೆ ಕೈಜೋಡಿಸಿ ಕರ್ನಾಟಕದಲ್ಲಿ ಕೇಸರಿ ಪಡೆಗಳನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.

loader