ಚಾಮರಾಜನಗರ

ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ, ಗೊರವರ ಕುಣಿತದ ಕಲಾವಿದ ರಾಮಸಮುದ್ರದ ಪುಟ್ಟಮಲ್ಲೇಗೌಡ (95) ಸೋಮವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ. ಗೊರವರ ಕುಣಿತವನ್ನು ಜಿಲ್ಲೆಯಿಂದ ರಾಜ್ಯ, ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪುಟ್ಟಮಲ್ಲೇಗೌಡರಿಗೆ ಸಲ್ಲುತ್ತದೆ. ನಗರ ಸಮೀಪದ ರಾಮಸಮುದ್ರ ಗ್ರಾಮದವರಾದ ಪುಟ್ಟಮಲ್ಲೇಗೌಡ ಬಾಲ್ಯದಿಂದಲೇ ಗೊರವರ ವೇಷ ಧರಿಸಿ ಕುಣಿತ ಆರಂಭಿಸಿದವರು. ಸ್ಥಳೀಯ ಕಲೆಯನ್ನು ದೇಶದ ವಿವಿಧೆಡೆಗೆ ಪಸರಿಸಿದ ಪುಟ್ಟಮಲ್ಲೇಗೌಡರ ಸೇವೆಯನ್ನು ಗುರುತಿಸಿ ಜಾನಪದಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ದೆಹಲಿ, ಪಾಂಡಿಚೇರಿ, ಅಂಡಮಾನ್‌ ನಿಕೋಬಾರ್‌ ಸೇರಿದಂತೆ ವಿವಿಧೆಡೆ ಅವರು ಗೊರವರ ಕುಣಿತ ಪ್ರದರ್ಶನ ನೀಡಿದ್ದರು. 

ಪ್ರಸ್ತುತ ತಮ್ಮ ಪುತ್ರಿಯ ಮನೆಯಲ್ಲಿ  ಅವರು ವಾಸವಿದ್ದರು. ಕೆಲ ವರ್ಷಗಳಿಂದ ವಯೋಸಹಜ ಅನಾರೋಗ್ಯ ಅವರನ್ನು ಬಾಧಿಸುತ್ತಿತ್ತು. ಮೃತರ ಅಂತ್ಯಕ್ರಿಯೆ ಮಂಗಳವಾರ ರಾಮಸಮುದ್ರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಪುಟ್ಟಮಲ್ಲೇಗೌಡರ ನಿಧನಕ್ಕೆ  ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಹಾಗೂ ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.