ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಸಮ್ಮಿಶ್ರ ಸರ್ಕಾರದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಿಗೆ ಮಂಗಳವಾರ ಔತಣಕೂಟ ನೀಡಿದರು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಕೆಶಿ ಮೂರು ತಾಸು ಕೂತು ಪಟ್ಟಾಂಗ ಹೊಡೆದರೆ, ಬಿಜೆಪಿಯ ಗೂಳಿಹಟ್ಟಿ ಶೇಖರ್ ಕೂಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. 

ಖಾಸಗಿ ಹೊಟೇಲ್‌ನಲ್ಲಿ ನಡೆದ ಈ ಭೋಜನ ಕೂಟಕ್ಕೆ ರಾತ್ರಿ 8 ಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾತ್ರಿ 11ರವರೆಗೂ ಇದ್ದರು. ಔತಣಕೂಟದಲ್ಲಿ ಪಾಲ್ಗೊಂಡಿದ್ದವರೊಂದಿಗೆ ಬೆರೆತು ೩ ತಾಸುಗಳ ಕಾಲ ಕಳೆದರು. ಕುತೂಹಲಕಾರಿ ಸಂಗತಿಯೆಂದರೆ, ಎಚ್.ಡಿ.ರೇವಣ್ಣ ಸಹ ಔತಣಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು. ಇದನ್ನು ಮೀರಿದ ಅಚ್ಚರಿಯೆಂದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಯೋಜಿಸಿದ್ದ ಈ ಔತಣ ಕೂಟದಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್ ಕಾಣಿಸಿಕೊಂಡಿದ್ದು. ಶಿವಕುಮಾರ್ ಆಹ್ವಾನದ ಮೇರೆಗೆ ಗೂಳಿಹಟ್ಟಿ ಶೇಖರ್ ಆಗಮಿಸಿದ್ದರು.

ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಶೇಖರ್ ಆಪ್ತರು ಹೇಳುತ್ತಾರೆ. ಆದರೂ, ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳ ಕೂಟದಲ್ಲಿ ಪ್ರತಿಪಕ್ಷ ಬಿಜೆಪಿಯ ಏಕೈಕ ಶಾಸಕ ಪಾಲ್ಗೊಂಡಿದ್ದು ಹಲವರ ಹುಬ್ಬೇರುವಂತಾಗಿದೆ. ಉಳಿದಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ ಖರ್ಗೆ, ವೆಂಕಟರಮಣಪ್ಪ, ಕೃಷ್ಣ ಬೈರೇಗೌಡ, ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ, ನಾರಾಯಣಸ್ವಾಮಿ, ನರೇಂದ್ರ, ಮುನಿಯಪ್ಪ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ರಾಜಶೇಖರ್ ಪಾಟೀಲ್, ಕೆ.ಜೆ.ಜಾರ್ಜ್, ಮುನಿರತ್ನ, ಪುಟ್ಟರಂಗಶೆಟ್ಟಿ, ಡಾ.ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಧರ್ಮಸೇನಾ, ಭೈರತಿ ಸುರೇಶ್, ರಾಮಪ್ಪ, ಮಾಜಿ ಸಚಿವ ಪಿ.ಟಿ.ಪರಮೇಶ್ವರ್‌ನಾಯ್ಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.