ಕೊಡಗು : ಪ್ರಕತಿ ಸೌಂದರ್ಯ ಮತ್ತು ಸ್ವಭಾವಿಕ ಪರಿಸರದಿಂದ ಇಡೀ ವಿಶ್ವದ ಗಮನ ಸೆಳೆದ ಕೊಡಗು ಜಿಲ್ಲೆಗೆ 2018, ಘನಘೋರ ವಿಪತ್ತಾಗಿ ಕಾಡಿತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾವಿಪತ್ತಿನಲ್ಲಿ ಸಾವು-ನೋವುಗಳ ದರ್ಶನವಾಯಿತು. ಜನರು ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಾಯಿತು. ಕಳೆದ ಆಗಸ್ಟ್ ತಿಂಗಳಲ್ಲಿ ಘಟಿಸಿದ ಪ್ರಕೃತಿ ವಿಕೋಪದ ಕರಾಳ ಛಾಯೆ ಇನ್ನು ಮಾಸಿಲ್ಲ.  
ವರ್ಷಾಂತ್ಯದ ಈ ಘಳಿಗೆಯಲ್ಲೂ ಪರಿಹಾರ ಕಾರ್ಯ ನಡೆಯುತ್ತಲೇ ಇದೆ. ಆನೆ, ಹುಲಿಗಳ ‘ದಾಳಿಯಿಂದ ತಲ್ಲಣರಾಗಿದ್ದ ಜನತೆಯ ಗಾಯದ ಮೇಲೆ ಬರೆ ಎಳೆದಂತೆ ಎರಗಿದ ಜಲಪ್ರಳಯ, ಬದುಕನ್ನೇ ಕಸಿದುಕೊಂಡಿತು. ಜಿಲ್ಲೆಯಲ್ಲಿ ಭದ್ರಕೋಟೆ ನಿರ್ಮಿಸಿಕೊಂಡಿರುವ ಬಿಜೆಪಿ, ಈ ವರ್ಷ  ನಡೆದ ಚುನಾವಣೆಯಲ್ಲು  ಎರಡು ಸ್ಥಾನಗಳನ್ನು  ಉಳಿಸಿಕೊಂಡು  ಕೋಟೆಯನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಜುಲೈ  19ರಂದು  ತಲಕಾವೇರಿಗೆ ಭೇಟಿ ನೀಡಿದ ಬಳಿಕವೂ ಗದ್ದುಗೆ  ಉಳಿಸಿಕೊಳ್ಳುವ ಮೂಲಕ ಕುಮಾರಸ್ವಾಮಿ, ಹಲವರ ನಂಬಿಕೆಯನ್ನು  ಹುಸಿಗೊಳಿಸಿದ್ದೂ ಅಲ್ಲದೆ, ಅಕ್ಟೋಬರ್  17ರ  ತೀರ್ಥೋದ್ಭವಕ್ಕೂ ಸಿಎಂ ಮರಳಿ ಬಂದರು. ವರ್ಷಗಳ ಹಿಂದೆ ನಡೆದ ಟಿಪ್ಪು ಜಯಂತಿ ಘರ್ಷಣೆ, ಸಾವು ನೋವುಗಳ ಮಧ್ಯೆಯೂ ಈ ವರ್ಷವೂ ಪರ-ವಿರೋಧ, ಪ್ರತಿಭಟನೆ, ಬಂಧನಗಳ ನಡುವೆ ಟಿಪ್ಪು ಜಯಂತಿ ನಡೆಯಿತು. ವರ್ಷವಿಡೀ ನಡೆದ ಎಲ್ಲ  ವಿದ್ಯಮಾನಗಳು ಮರೆಯುವಂತೆ ಮಾಡಿ,  ಪ್ರಕತಿ ವಿಕೋಪದ ಕರಾಳ ಅಧ್ಯಾಯವೇ ಮೆರೆದಿರುವುದು 2018ರ ವಿಶೇಷ. 
 
ಜನವರಿ 
3 ವರ್ಷಗಳ ನಂತರ ಜಿಲ್ಲೆಗೆ ಸಿಎಂ! 

ಜ. 9 ರಂದು ಮೂರು ವರ್ಷಗಳ ನಂತರ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಮಡಿಕೇರಿಯಲ್ಲಿ ನಡೆದ ಸಾನಾತನ ಸಂಸ್ಥೆಯ  ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು. ಜನವರಿ ತಿಂಗಳಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ತಾಲೂಕನ್ನಾಗಿ ಘೋಷಣೆ ಮಾಡುವಂತೆ ಪ್ರತಿಭಟನೆ ತೀವ್ರಗೊಂಡಿತ್ತು. ಮಡಿಕೇರಿ ಆಕಾಶವಾಣಿಯಿಂದ ಜ.12ರಿಂದ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ 6ನೇ ವರ್ಷದ ಕಾಡಿನ ಮಕ್ಕಳ ರೇಡಿಯೋ ಹಬ್ಬ ನಡೆದಿತ್ತು. ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಜಿಲ್ಲಾಧ್ಯಕ್ಷರಾಗಿದ್ದ  ಭರತ್ ಕುಮಾರ್ ರಾಜೀನಾಮೆ ನೀಡಿದ್ದರು.  ಜ. 22ರಂದು ಛತ್ತೀಸ್‌ಗಡಕ್ಕೆ ದುಬಾರೆ ಸಾಕಾನೆ ಶಿಬಿರದಿಂದ 3 ಕಾಡಾನೆಗಳ ಪೈಕಿ 2ನ್ನು ಕಳುಹಿಸಿಕೊಡಲಾಗಿತ್ತು. ಅಜ್ಜಯ್ಯ ಆನೆ ಹಿಂದೇಟು ಹಾಕಿತ್ತು. ಜ.24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತತ್ವದಲ್ಲಿ ಪರಿವರ್ತನಾ ರ್ಯಾಲಿ ಮಡಿಕೇರಿಗೆ ಆಗಮಿಸಿತ್ತು. ಅಂದು ಕೊಡಗಿನ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಮತ್ತೆ ಶಾಸಕರಾಗಲಿದ್ದಾರೆಂದು ಬಿಎಸ್‌ವೈ  ಭವಿಷ್ಯ ನುಡಿದಿದ್ದರು. ಜ.26ರಂದು ಮಡಿಕೇರಿಯಲ್ಲಿ ಜಿಲ್ಲಾಡಳಿತದಿಂದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ಪಾಲ್ಗೊಂಡಿದ್ದರು. ಕಸಾಪ ವತಿಯಿಂದ ಜ.31ರಂದು ಜಿಲ್ಲಾ ಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿತ್ತು.

ಫೆಬ್ರವರಿ 
ಆತಂಕ ತಂದಿದ್ದ ನಕ್ಸಲರ ಪ್ರತ್ಯಕ್ಷ! 

ಫೆ.1ರಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಕೇಂದ್ರ ಬಜೆಟ್ ಮಂಡಿಸಿದ್ದರು. ಕೊಡಗಿಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಫೆ. 2ರಂದು ದಕ್ಷಿಣಕನ್ನಡ-ಕೊಡಗು ಜಿಲ್ಲೆಯ ಗಡಿ ಪ್ರದೇಶ ಕೊಯನಾಡು ಬಳಿಯ ಗುಡ್ಡಗದ್ದೆಯಲ್ಲಿ ಮೂರು ಮಂದಿ ನಕ್ಸಲರು ಪ್ರತ್ಯಕ್ಷರಾಗಿದ್ದರು. ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ದಳದಿಂದ ಶೋಧ ಕಾರ್ಯ ನಡೆದಿತ್ತು. ಫೆ. 4ರಂದು ಪ್ರವಾಸಿತಾಣ ರಾಜಾಸೀಟಿನಲ್ಲಿ ಬೆಂಕಿ ಕಾಣಿಸಿಕೊಂಡು 5 ಎಕರೆ ಪ್ರದೇಶ ‘ಸ್ಮವಾಗಿತ್ತು.  ಅಸ್ಸಾಂನಲ್ಲಿ ನಡೆದ  8ನೇ ನ್ಯಾಷನಲ್ ಸಬ್ ಜೂನಿಯರ್ ಫೈನಲ್ ಪಂದ್ಯದಲ್ಲಿ ಹಾಕಿ ಕೂರ್ಗ್ ತಂಡ ಪ್ರಥಮ ಬಾರಿಗೆ  ಫೈನಲ್ ಪ್ರವೇಶ ಪಡೆದು, ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು. ಫೆ.16ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದರು. ಕೊಡಗು ಜಿಲ್ಲೆಯ ತಲಕಾವೇರಿ-ಮಡಿಕೇರಿ ರಸ್ತೆ ಡಾಂಬರೀಕರಣಕ್ಕೆ ರು.10 ಕೋಟಿ ಹಾಗೂ ಎಸ್ಟೇಟ್‌ಗಳಲ್ಲಿ ಮರ ಕಡಿಯುವ ನಿಯಮ ಸರಳೀಕರಿಸಿ ಬಜೆಟ್ ಘೋಷಿಸಿದ್ದರು. ಮೈಸೂರು-ಕೊಡಗಿನ ಮೂಲಕ ಕೇರಳಕ್ಕೆ ರೈಲು ಯೋಜನೆ ವಿರೋಧಿಸಿ ಫೆ.18ರಂದುಮೈಸೂರಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಕೊಡಗಿನ ಹೆಚ್ಚಿನ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಫೆ.19ರಂದು ನಾಪೋಕ್ಲು ಸಮೀಪದ ನಾಲಡಿಯಲ್ಲಿ ಮೂವರು ನಕ್ಸಲರು ಪ್ರತ್ಯಕ್ಷಗೊಂಡು ಆತಂಕ ಸಷ್ಟಿಸಿದ್ದರು. 

ಮಾರ್ಚ್ 
ಆನೆಕಾಡಿನಲ್ಲಿ ಭಾರೀ ಬೆಂಕಿ! 

ಮಾ.2ರಂದು ಆನೆಕಾಡು ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡು ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. ಮಾ.3ರಂದು ಕುಶಾಲನಗರದಲ್ಲಿ ರಾಜ್ಯ ಬಿಜೆಪಿ ಜನಸುರಕ್ಷಾಯಾತ್ರೆಗೆ ಕೇಂದ್ರ ಸಚಿವ ಸದಾನಂದ ಗೌಡ ಚಾಲನೆ ನೀಡಿದ್ದರು. ಹಾಕಿ ಆಟಗಾರ ಎಸ್.ವಿ. ಸುನಿಲ್ ಮಾ. 4ರಂದು ಮಂಗಳೂರಿನಲ್ಲಿ ನಿಶಾ ಅವರನ್ನು ವಿವಾಹವಾಗಿದ್ದರು.  5ರಂದು ಮಡಿಕೇರಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಮಾ. 5ರಂದು ಹಾಕಿ ಆಟಗಾರ ಅಯ್ಯಪ್ಪಗೆ ಏಕಲವ್ಯ ಪ್ರಶಸ್ತಿ ದೊರಕಿತ್ತು. ಮಾ. 9ರಂದು ರಾಜಾಸೀಟಿನಲ್ಲಿ ಫಲಪುಷ್ಪಪ್ರದರ್ಶನ ನಡೆದಿತ್ತು. ಮಡಿಕೇರಿ ಕೋಟೆ, ಕಾವೇರಿ ತೀರ್ಥಕುಂಡಿಕೆ ಪ್ರಮುಖ ಆಕರ್ಷಣೆಯಾಗಿತ್ತು. ಮಾ. 15ರಂದು ವಿರಾಜಪೇಟೆ ತಾಲೂಕಿನಲ್ಲಿ ಪ್ರತ್ಯೇಕ ಘಟನೆಯಲ್ಲಿ ಮೂರು ಕಾಡಾನೆಗಳು ಸಾವನಪ್ಪಿತ್ತು. ರಂಗಸಮುದ್ರ ಹಾಗೂ ಶ್ರೀಮಂಗಲದಲ್ಲಿ ಮತ್ತೆ ಎರಡು ಕಾಡಾನೆಗಳು ಮತಪಟ್ಟಿತ್ತು. ಮಾ. 22ರಂದು ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಇಂದಿರಾ ಕ್ಯಾಟೀನ್ ಅನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ಉದ್ಘಾಟಿಸಿದ್ದರು. ಮಾ. 30ರಂದು ಪಾಲಂಗಾಲದಲ್ಲಿ ಕಾಡನೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.  

ಏಪ್ರಿಲ್ 
ವಿಧಾನಸಭಾ ಚುನಾವಣೆ ಕಾವು 

ಏಪ್ರಿಲ್ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿತ್ತು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷೇತರರು ಸ್ಪರ್ಧೆ ನಡೆಸಲು ತಯಾರಿ ಮಾಡುತ್ತಿದ್ದರು. ಬಿಜೆಪಿಯಿಂದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಕಾಂಗ್ರೆಸ್‌ನಿಂದ ಅರುಣ್ ಮಾಚಯ್ಯ, ಕೆ.ಪಿ. ಮಂದ್ರಕಲಾ, ಜೆಡಿಎಸ್‌ನಿಂದ ಬಿ.ಎ. ಜೀವಿಜಯ, ಸಂಕೇತ್ ಪೂವಯ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಏ.16ರಂದು ಗೌಡ ಕುಟುಂಬಗಳ ನಡುವಿನ ಚೆರಿಯಮನೆ ಕ್ರಿಕೆಟ್ ಕಪ್ ಮಡಿಕೇರಿಯಲ್ಲಿ ನಡೆದಿತ್ತು. 224 ತಂಡಗಳು ನೋಂದಾಯಿಸಿಕೊಂಡಿತ್ತು. ಏ. 16ರಂದು ಕೊಡವ ಕುಟಂಬಗಳ ನಡುವಿನ ಕೌಟುಂಬಿಕ ಹಾಕಿ ಕುಲ್ಲೇಟಿರ ಕಪ್‌ಗೆ ಚಾಲನೆ ದೊರೆತಿತ್ತು. ಸುಮಾರು 333 ತಂಡಗಳು ಪಾಲ್ಗೊಂಡಿತ್ತು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಏ.27ರಂದು ಗೋಣಿಕೊಪ್ಪಲುವಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಏ.30ರಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಶೇ.83.94ರಷ್ಟು ಫಲಿತಂಶ ಪಡೆದು ಕೊಡಗು ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿತ್ತು.  

ಮೇ
ಮತ್ತೆ ಶಾಸಕರಾದ ಶಾಸಕರು! 

ಮೇ.7ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಕೊಡಗು ಜಿಲ್ಲೆ 18ನೇ ಸ್ಥಾನ ಪಡೆದುಕೊಂಡಿತ್ತು. ವಿಧಾನಸಭಾ ಚುನಾವಣೆ ಹಿನ್ನೆಲೆ ಮೇ.8ರಂದು ಮಡಿಕೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಆಗಮಿಸಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ್ದರು. ಮೇ.12ರಂದು ವಿಧಾನಸಭಾ ಚುನಾವಣೆ ನಡೆದಿತ್ತು. ಶೇ.75ರಷ್ಟು ಮತದಾನವಾಗಿತ್ತು. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಿಗೆ ವಿವಿ‘ ಪಕ್ಷಗಳ ಒಟ್ಟು  17 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೇ. 15ರಂದು ಮತ ಎಣಿಕೆ ನಡೆದಿತ್ತು. ಮಡಿಕೇರಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ 70,631  ಮತಗಳಿಸಿ ಜೆಡಿಎಸ್‌ನ ಬಿ.ಎ. ಜೀವಿಜಯ ಅವರ ವಿರುದ್ಧ ಗೆಲುವು ಸಾಸಿದರೆ, ವಿರಾಜಪೇಟೆ ಕ್ಷೇತ್ರದಿಂದ ಕೆ.ಜಿ. ಬೋಪಯ್ಯ 77,944 ಮತ ಪಡೆದು ಅರಣ್ ಮಾಚಯ್ಯ ಅವರ ವಿರುದ್ಧ ಗೆದ್ದಿದ್ದರು. ಇಬ್ಬರು ಶಾಸಕರು 2018ರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತವನ್ನು ಪಡೆದಿದ್ದರು. ಮೇ.20ರಂದು ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಕುಲ್ಲೇಟಿರ ಹಾಕಿ ಉತ್ಸವ ಕೊನೆಗೊಂಡಿತು. ಚೇಂದಂಡ ತಂಡ ಚಾಂಪಿಯನ್ ಪ್ರಶಸ್ತಿ ಪಡೆದರೆ, ಅಂಜಪರವಂಡ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತ್ತು. ಕೊಡಗು ಜಿಲ್ಲೆಗೆ ಮೇ. 29ರಂದು ಮುಂಗಾರು ಮಳೆಯ ಆಗಮನವಾಯಿತು.


ಜೂನ್
ಆರಂಭದಲ್ಲೇ ಆರ್ಭಟಿಸಿದ್ದ ಮುಂಗಾರು!

ಜೂ. 8ರಂದು ದಕ್ಷಿಣ ಕೊಡಗಿನಲ್ಲಿ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದ ಸಂದರ್ಭ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೂ.9ರಂದು ಕೊಡಗು ಜಿಲ್ಲೆಯಾದ್ಯಂತ  ಭಾರೀ ಮಳೆಯಾಗಿತ್ತು. ಭಾರಿ ಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿತ್ತು. ಜೂನ್ ತಿಂಗಳಲ್ಲೇ  ಭಾಗಮಂಡಲ ಜಲಾವೃತಗೊಂಡಿತ್ತು. ಜೂ. 13ರಂದು ಭಾರೀ ಮಳೆಯ ಪರಿಣಾಮ ಪೆರುಂಬಾಡಿಯಲ್ಲಿ ರಸ್ತೆ ಕುಸಿದಿತ್ತು. ಪರಿಣಾಮ ಕೊಡಗು-ಕೇರಳ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲೆಯ ಹಲವಾರು ಜಲಪಾತಗಳು ಜೂನ್ ತಿಂಗಳಲ್ಲೇ ಉಕ್ಕಿ ಹರಿದವು. ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿತ್ತು. ಹುಲಿ ದಾಳಿಯಿಂದ ಹಲವು ಜಾನುವಾರುಗಳು ಸಾವನಪ್ಪಿತ್ತು. 

ಜುಲೈ
ಆತಂಕ ತಂದಿದ್ದ ಲಘು ಭೂಕಂಪನ!

ಜು.5ರಂದು ಮೈತ್ರಿ ಸರ್ಕಾರದಿಂದ ಮೊದಲ ಬಜೆಟ್ ಮಂಡಿಸಲಾಯಿತು. ಆದರೆ ಕೊಡಗು ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆಯಾಗಿರಲಿಲ್ಲ. ಜು.6ರಂದು ಕೊಡಗಿನಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿತ್ತು. ಭಾಗಮಂಡಲ ಮೂರನೇ ಬಾರಿ ಜಲಾವೃತಗೊಂಡಿತ್ತು. ಜು.9ರಂದು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಹಲವೆಡೆ ಲಘು ಭೂಕಂಪನವಾಗಿತ್ತು. ಜನರು ಆತಂಕಕ್ಕೆ ಒಳಗಾಗಿದ್ದರು. ಇದಾದ ನಂತರವೂ ಜಿಲ್ಲೆಯಲ್ಲಿ ಮಳೆಯಬ್ಬರ ಹೆಚ್ಚಾಗಿತ್ತು. ಮುಖ್ಯಮಂತ್ರಿಯಾದ ನಂತರ ಜು.19ರಂದು ಕೊಡಗು ಜಿಲ್ಲೆಗೆ ಕುಮಾರಸ್ವಾಮಿ ಪ್ರಥಮ ಬಾರಿಗೆ ಭೇಟಿ ನೀಡಿದ್ದರು. ಮೈದುಂಬಿದ್ದ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಜು.20ರಂದು ತಲಕಾವೇರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದರು. ಜು.21ರಂದು ಸಂಕೇತ್ ಪೂವಯ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 

ಆಗಸ್ಟ್ 
ಬೆಚ್ಚಿ ಬೀಳಿಸಿದ ಮಳೆ, ಪ್ರಕತಿ ವಿಕೋಪ!

ಇದು ಕೊಡಗು ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ತಿಂಗಳು. ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಯಿತು. ಪ್ರಕೃತಿ ವಿಕೋಪ ಉಂಟಾಗಿ ಅಪಾರ ಸಾವು-ನೋವು ಸಂಭವಿಸಿತ್ತು. ಆ.13ರಂದು ಮಡಿಕೇರಿ-ಮಂಗಳೂರು ಹೆದ್ದಾರಿ ಮದೆನಾಡಿನಲ್ಲಿ ರಸ್ತೆಯ ಮೇಲೆ ಬರೆ ಜರಿದು ಸಂಚಾರ ಸ್ಥಗಿತಗೊಂಡಿತ್ತು. ಆ.15ರಂದು ಮಡಿಕೇರಿ-ಸೋಮವಾರಪೇಟೆ ಮಾರ್ಗದ ಮಾದಾಪುರದಲ್ಲಿ ರಸ್ತೆ ಬಿರುಕುಬಿಟ್ಟು ಸಂಚಾರ ಬಂದ್ ಆಗಿತ್ತು. ಆ.16ರಂದು ಕಾಟಕೇರಿಯಲ್ಲಿ ಗುಡ್ಡ ಕುಸಿದು ಬಂದೇ ಕುಟುಂಬ ಮೂವರು ಸಾವನಪ್ಪಿದ್ದರು. ಮಡಿಕೇರಿಯ ಮುತ್ತಪ್ಪ ದೇವಾಲಯದಲ್ಲಿ ಮನೆಯೊಂದು ಕುಸಿದುಬಿದ್ದಿತ್ತು. ಆ. 17ರಂದು ಭಾರೀ ಮಳೆಯಿಂದಾಗಿ ಮನೆ ಬೆಟ್ಟಗಳೇ ಕುಸಿಯಿತು. ಮಡಿಕೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಜನರು ಸಂತ್ರಸ್ತರಾದರು. ಸುಮಾರು 18ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದರು. ಹಾರಂಗಿ ಜಲಾಶಯದಿಂದ ಹೆಚ್ಚು ನೀರು ಹರಿಯಬಿಟ್ಟ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಮುಳುಗಡೆಗೊಂಡಿತ್ತು. ಆ.18ರಂದು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಾಮಳೆ ಸಂತ್ರಸ್ತರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆ.24ರಂದು ಜಿಲ್ಲೆಯ ಪ್ರಕೃತಿ ವಿಕೋಪ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ರು.8 ಕೋಟಿ ತುರ್ತು ನೆರವು ಘೋಷಿಸಿದ್ದರು. ಆಗಸ್ಟ್ ತಿಂಗಳ ಮಳೆ, ಪ್ರಕೃತಿ ವಿಕೋಪಕ್ಕೆ ಜಿಲ್ಲೆಯ ಸುಮಾರು 20ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಜೋಡುಪಾಲದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಮಂಜುಳಾ ಮೃತದೇಹ ಇನ್ನೂ ಪತ್ತೆಯಾಗಲಿಲ್ಲ. 

ಸೆಪ್ಟಂಬರ್
ಮಾಸದ ಪ್ರಕತಿ ವಿಕೋಪದ ನೋವು!

ಆಗಸ್ಟ್ ತಿಂಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದರ ಪರಿಣಾಮವಾಗಿ ಸೆಪ್ಟಂಬರ್‌ನಲ್ಲೂ ವಿಕೋಪದ ನೋವು ಜನರನ್ನು ಕಾಡುತ್ತಿತ್ತು. ಮನೆ ಕಳೆದುಕೊಂಡು ಜನ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ತಂಗಿದ್ದರು. ಜಿಲ್ಲೆಗೆ ಸಚಿವರು ಆಗಮಿಸುತ್ತಿದ್ದರು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರಗಳಲ್ಲಿ ತಂಗಿದ್ದವರು ತಮ್ಮ ಮನೆಗಳತ್ತ ಹೆಜ್ಜೆಯಾಕಿದ್ದರು. ಸಂತ್ರಸ್ತರಿಗೆ ನೀಡಲು ಮಡಿಕೇರಿಯ ಹೊರ ವಲಯದಲ್ಲಿ ಮಾದರಿ ಮನೆಗಳನ್ನು ನಿರ್ಮಿಸಲಾಯಿತು. ಸೆ. 12ರಂದು ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಿ ಜಿಲ್ಲೆಯ ಪ್ರಕೃತಿ ವಿಕೋಪ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಪ್ರಕೃತಿ ವಿಕೋಪದಿಂದ ಸಂಪರ್ಕ ಕಡಿತಗೊಂಡಿದ್ದ ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಸೆ. 21ರಂದು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಮಾನವನೇ ಕಾರಣ ಎಂದು ಭೂ ಸರ್ವೇಕ್ಷಣಾ ಇಲಾಖಾಧಿಕಾರಿಗಳು ಸೆ.25ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಪ್ರಕೃತಿ ವಿಕೋಪ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸೆ.28ರಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಸೆ.29ರಂದು ಕೊಡಗಿನ  ಭಾಗಮಂಡಲ, ಹೆಬ್ಬಾಲೆ, ಪಾಲಿಬೆಟ್ಟ ಗ್ರಾಪಂಗಳು ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. 

ಅಕ್ಟೋಬರ್
ತಲಕಾವೇರಿಗೆ ತೀರ್ಥೋದ್ಭದಲ್ಲಿ ಸಿಎಂ  ಭಾಗಿ!

ಅ.10ರಂದು ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾಗೆ ಚಾಲನೆ ದೊರೆತಿತ್ತು. ಮಡಿಕೇರಿ ದಸರಾಗೆ ರು.50  ಲಕ್ಷ ಘೋಷಣೆಯಾಗಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಕ್ರೀಡಾ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಬಿಡಲಾಗಿತ್ತು. ಅ. 17ರಂದು ತಲಕಾವೇರಿಯಲ್ಲಿ ಸಂಜೆ  6.45ಕ್ಕೆ ತೀರ್ಥೋದ್ಭವ ಜರುಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ತೀರ್ಥೋದ್ಭವದಲ್ಲಿ ಪಾಲ್ಗೊಂಡ ಹೆಗ್ಗಳಿಕೆಗೆ ಕುಮಾರಸ್ವಾಮಿ ಸಾಕ್ಷಿಯಾದರು. ಮಡಿಕೇರಿಯಲ್ಲಿ ಅ.17ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಂತ್ರಸ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಜಿಲ್ಲೆಗೆ ಪುನರ್ ನಿರ್ಮಾಣ ಪ್ರಾಧಿಕಾರದ ಘೋಷಣೆ ಮಾಡಿದ್ದರು. ಅ.20ರಂದು ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ನಡೆದಿತ್ತು. ಪ್ರಶಸ್ತಿ ಇಲ್ಲದ ಮಂಟಪಗಳು ಪ್ರದರ್ಶನ ನೀಡಿದ್ದವು. ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಿತ್ತು. ಅ.26ರಂದು ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣವನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು. ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿಗಳಿಗೆ ಅ.28ರಂದು ಮತದಾನ ನಡೆದಿತ್ತು. 

ನವೆಂಬರ್ 
ವಿರೋಧದ ನಡುವೆಯೂ ಟಿಪ್ಪು ಜಯಂತಿ!

ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್  ಭಾಗವಹಿಸಿದ್ದರು. ನ.6ರಂದು ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ವೇಳೆ ಬರೆ ಕುಸಿದು ಮಹಿಳಾ ಕಾರ್ಮಿಕರಿಬ್ಬರು ಭೂ ಸಮಾಧಿಯಾಗಿದ್ದರು. ನ.10ರಂದು ವಿರೋಧದ ನಡುವೆಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆದಿತ್ತು. ಜಿಲ್ಲೆಯ ಶಾಸಕರು ಸೇರಿದಂತೆ ಹಿಂದೂಪರ ಕಾರ್ಯಕರ್ತರು ಬಂಧನ-ಬಿಡುಗಡೆಗೊಂಡಿದ್ದರು. ಪತ್ರಕರ್ತ ಸಂತೋಷ್ ಬಂಧನ ವಿರೋಧಿಸಿ ನ. 14ರಂದು ಮಡಿಕೇರಿಯಲ್ಲಿ ಒಂದು ತಾಸು ಬಂದ್ ನಡೆದಿತ್ತು. ಪೊನ್ನಂಪೇಟೆ ಶ್ರೀ ರಾಮಕಷ್ಣ ಶಾರಾದಾಶ್ರಮದ ಸಂಸ್ಥಾಪಕ ಸ್ವಾಮಿ ಜಗದಾತ್ಮನಂದಾಜಿ(89) ನ.15ರಂದು ನಿಧನರಾಗಿದ್ದರು. ಆ.13ರಂದು ಬಂದ್ ಆಗಿದ್ದ ಮಡಿಕೇರಿ-ಸಂಪಾಜೆ ಸಂಚಾರಕ್ಕೆ ನ.16ರಂದು ಮುಕ್ತ ಅವಕಾಶ ನೀಡಲಾಯಿತು. ನ.19ರಂದು ಗ್ರೀನ್ ಸಿಟಿ ಫಾರಂನಿಂದ ನಡೆದ ಸ್ವಚ್ಛತಾ ಆಂದೋಲನಕ್ಕೆ ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ರಾಯಭಾರಿಯಾಗಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಪ್ರಕೃತಿ ವಿಕೋಪದ ಹಿನ್ನೆಲೆ ನ.23ರಂದು ಹುತ್ತರಿ ಹಬ್ಬವೂ ಕಳೆಗುಂದಿತ್ತು. ನ.28ರಂದು ನಟ ಜೈ ಜಗದೀಶ್ ಹಾಗೂ ಹಾಕಿ ಆಟಗಾರ ವಿ.ಎಸ್. ವಿನಯ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು. 


ಡಿಸೆಂಬರ್
ಸಂತ್ರಸ್ತರ ಮನೆ ಕಾಮಗಾರಿಗೆ ಸಿಎಂ ಚಾಲನೆ

ಡಿ.1ರಂದು ಮಡಿಕೇರಿಯಲ್ಲಿ ವಿಹೆಚ್‌ಪಿ ಹಾಗೂ ಬಜರಂಗದಳದಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಬಹತ್ ಜನಾಗ್ರಹ ಸಭೆ ನಡೆದಿತ್ತು. ಡಿ.2ರಂದು ಸಿಎನ್‌ಸಿ ವತಿಯಿಂದ 28ನೇ ವರ್ಷದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮ ನಡೆದಿತ್ತು. ಪಾಲಿಬೆಟ್ಟ ಗ್ರಾಪಂಗೆ ಡಿ. 4ರಂದು ಆಫ್ರಿಕಾ ಖಂಡದ 8 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ಡಿ.7ರಂದು ಕೊಡಗು ಜಿಲ್ಲೆ ಜಂಬೂರು ಗ್ರಾಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸಿ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ಸುಮಾರು 840 ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.

ಉಪ ಮುಖ್ಯಮಂತ್ರಿ ಪರಮೇಶ್ವರ್ ಕೂಡ ಇದ್ದರು. ಡಿ.8ರಂದು ಹೆದ್ದಾರಿ ಹಾಗೂ ರೈಲು ಯೋಜನೆ ವಿರೋಧಿಸಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯಿಂದ ಸಮಾವೇಶ ನಡೆದಿತ್ತು. ಇದಕ್ಕೆ ಸೇವ್ ಕೊಡಗು ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದರು. ಡಿ.13ರಂದು ಕೊಡಗಿನ ಹಿರಿಯ ಸೇನಾಧಿಕಾರಿಯಾಗಿದ್ದ ಲೆಫ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ. ನಂದಾ ನಿಧನರಾಗಿದ್ದರು. ಡಿ.14ರಂದು ಅಬ್ಬಿಜಲಪಾತ ಸಮೀಪವಿದ್ದ ಅವರ ಸ್ವಗ್ರಹದಲ್ಲಿ ಅಂತ್ಯಸಂಸ್ಕಾರ ನಡೆದಿತ್ತು. ಹಿರಿಯ ಸೇನಾಧಿಕಾರಿಗಳು ಪಾಲ್ಗೊಂಡು ಗೌರವ ಸೂಚಿಸಿದ್ದರು. ಡಿ.22 ಹಾಗೂ 23ರಂದು ಕಸಾಪ ವತಿಯಿಂದ ನಾಪೋಕ್ಲುವಿನಲ್ಲಿ ಕೊಡಗು ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು. ಭಾರದ್ವಾಜ್ ಕೆ. ಆನಂದ ತೀರ್ಥ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಡಿ.25ರಂದು ಹಾಕಿ ಆಟಗಾರ ನಿತಿನ್ ತಿಮ್ಮಯ್ಯ ವಿಷ್ಮಾ ದೇಚಮ್ಮ ಅವರನ್ನು ವಿವಾಹವಾಗಿದ್ದರು. ಡಿ.27ರಂದು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಸಭೆ ನಡೆದಿತ್ತು. ಒಂದು ವರ್ಷಗಳ ನಂತರ ಕೆಡಿಪಿ ಸಭೆ ನಡೆದದ್ದು ವಿಶೇಷವಾಗಿತ್ತು. ಡಿ.29ರಂದು ಸುಂಟಿಕೊಪ್ಪದಲ್ಲಿ ಬಳ್ಳಾರಿಯ ಖಾಸಗಿ ಪ್ರವಾಸಿ ಬಸ್ ಉರುಳಿಬಿದ್ದು ವಿದ್ಯಾರ್ಥಿಯೊಬ್ಬ ಮತಪಟ್ಟಿದ್ದ. ಹತ್ತಾರು ಮಕ್ಕಳು ಗಾಯಗೊಂಡಿದ್ದರು.