ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ.

ಬೆಂಗಳೂರು: ನಮ್ಮ ಮೆಟ್ರೋದಿಂದ ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ಮೆಟ್ರೋದ ನೀಲಿ ಮಾರ್ಗದ ಯೋಜನೆಯ ನಿರ್ಮಾಣ ಕೆಲಸ ಶೇಕಡಾ 70ರಷ್ಟು ಮುಕ್ತಾಯವಾಗಿದ್ದು, 58.19 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು 14,788 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2027ರ ಅಂತ್ಯದ ವೇಳೆ ಸಂಪೂರ್ಣ ಮಾರ್ಗದ ಕಾಮಗಾರಿ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದೆ.

58 ಕಿಲೋ ಮೀಟರ್ ಉದ್ದದ ಕಾರಿಡಾರ್

ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾದರೆ ನಿತ್ಯ ಕಚೇರಿಗೆ ತೆರಳುವ ವಾಹನ ಸವಾರರಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಗಲಿದೆ.

ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿ

ನಮ್ಮ ಮೆಟ್ರೋದ ಫೇಸ್ 2ಎ- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರ ನಡುವೆ 19.75 ಕಿಲೋ ಮೀಟರ್. ಫೇಸ್ 2ಬಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಆರ್ ಪುರಂ ವರೆಗೂ ಹೆಬ್ಬಾಳ, ಯಲಹಂಕ ಮೂಲಕ 38.44 ಕಿಲೋ ಮೀಟರ್ ಮಾರ್ಗವನ್ನು ಹೊಂದಿದೆ. ಎರಡು ಕಾರಿಡಾರ್ ಒಟ್ಟು ಮಾರ್ಗ 58.19 ಕಿಲೋ ಮೀಟರ್ ಇದ್ದು, 30 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.

ಬಿಎಂಆರ್ಸಿಎಲ್ ಮೂಲಗಳ ಅನ್ವಯ, ಸಿವಿಲ್ ವರ್ಕ್, ಟ್ರ್ಯಾಕ್ ನಿರ್ಮಾಣ, ಸಿಗ್ನಲ್ ಅಳವಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಉಳಿದ ಕಾಮಗಾರಿಯನ್ನು 2027ರ ಅಂತ್ಯದ ವೇಳೆ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.

ಈ ಯೋಜನೆಯೂ ಆರಂಭದಿಂದಲೂ ಹಲವು ಸವಾಲುಗಳನ್ನು ಎದುರಿಸಿತ್ತು. ಭೂಮಿ ಒತ್ತುವರಿ, ಮರಗಳ ತೆರವು, ಟ್ರಾಫಿಕ್, ಔಟರ್ ರಿಂಗ್ ರೋಡ್, ಕಾರ್ಮಿಕರ ಸಮಸ್ಯೆ ಮತ್ತು ಸುರಕ್ಷತೆಯ ಸಮಸ್ಯೆಗಳು ಕಾಮಗಾರಿಯ ವೇಳೆ ಎದುರಾಗಿತ್ತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಯೋಜನೆಯನ್ನು 2027ರ ಅಂತ್ಯದ ವೇಳೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೀಲಿ ಮಾರ್ಗವೂ ಕಾರ್ಯಾಚರಣೆಯನ್ನು ಆರಂಭ ಮಾಡಿದರೆ ಬೆಂಗಳೂರಿನ ಐಟಿ ಕಾರಿಡಾರ್ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ನಿತ್ಯ 6.15 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ತೆರಳುವ ಹಾಗೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ರಸ್ತೆ ಮಾರ್ಗಕ್ಕೆ ಗುಡ್ ಬೈ ಹೇಳಿ ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೂ ಔಟರ್ ರಿಂಗ್ ರೋಡ್ ನಲ್ಲಿ ಪ್ರಯಾಣಿಸುವ ವಾಹನ ಸವಾರರು ಖಾಸಗಿ ವಾಹನಗಳ ಬಳಕೆ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೆ, ಪ್ರಯಾಣ ಸಮಯ ಕಡಿತ, ವಾಹನ ಕಾರ್ಬನ್ ಬಿಡುಗಡೆ ಪ್ರಮಾಣ ಕಡಿಮೆಯಾಗಿ, ಸುರಕ್ಷಿತ ಸಂಚಾರ ಲಭ್ಯವಾಗಲಿದೆ.

ಸದ್ಯ ಶೇಕಡಾ 72 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನೀಲಿ ಮಾರ್ಗದ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಬಹುದು. ಅಲ್ಲದೇ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಿಗ್ ಬೂಸ್ಟ್ ಸಿಗಲಿದೆ. ಕೆಆರ್ ಪುರ, ಹೆಬ್ಬಾಳ, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಪ್ರದೇಶಗಳ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.