ನವದೆಹಲಿ(ಸೆ.10): ಈ ಹಿಂದೆ ಕ್ಯಾಟ್ ಯೋಗ, ಡಾಗ್ ಯೋಗ ಇನ್ನು ಹಲವು ವಿಲಕ್ಷಣ ಯೋಗದ ಬಗ್ಗೆ ಕೇಳಿದ್ದ ನಿಮಗೆ ಈಗ ಮತ್ತೊಂದು ವಿಚಿತ್ರ ಯೋಗ ಪದ್ದತಿಯ ಬಗ್ಗೆ ತಿಳಿಸಲಿದೆ ಈ ಸ್ಟೋರಿ. ಸದ್ಯ ಟ್ರೆಂಡ್ ಕ್ರಿಯೆಟ್ ಮಾಡಿ ತನ್ನದೆ ಖ್ಯಾತಿ ಪಡೆದುಕೊಳ್ಳುತ್ತಿದೆ 'ಗೋಟ್ ಯೋಗ' ಅಂದರೆ ಮೇಕೆ ಯೋಗ.

ಒರೆಗಾನದ ಯೋಗ ಶಿಕ್ಷಕಿ ಲೈನೀ ಮೋರ್ಸ್ ಈ ಹೊಸ ಮಾದರಿಯ ಗೋಟ್ ಯೋಗವನ್ನು ಪರಿಚಯಿಸಿದ್ದು, ಈಕೆ ತೆರೆದ ಮೈದಾನದಲ್ಲಿ ನೂರಾರು ಮೇಕೆಗಳ ಮಧ್ಯದಲ್ಲಿ ಯೋಗವನ್ನು ಕಲಿಸುತ್ತಿದ್ದು, ಶಿಬಿರಾರ್ಥಿಗಳ ಸುತ್ತಲು ಮೇಕೆಗಳು ಸುಳಿದಾಡುವುದಲ್ಲದೇ, ಅಲ್ಲಿ ಕಲಿಯಲು ಬಂದಿರುವವರ ಮೇಲೆಯೂ ಪ್ರೀತಿಯಿಂದ ಹತ್ತುವುದು ಇಳಿಯುವುದು ಮಾಡುತ್ತವೆ. ಈ ಹಿನ್ನಲೆಯಲ್ಲಿ ತನ್ನ ಯೋಗಕ್ಕೆ ಗೋಟ್ ಯೋಗ ಎಂದು ಹೆಸರಿಟ್ಟಿದ್ದಾರೆ. 

ಯೋಗ ಕಲಿಯುವ ಸಂದರ್ಭದಲ್ಲಿ ಈ ಸಾಧು ಪ್ರಾಣಿಗಳು ಅತಿತ್ತ ಸುಳಿದಾಡುವುದರಿಂದ ಒಂದು ರೀತಿಯಲ್ಲಿ ಮಾನಸಿಕ ನೆಮ್ಮದಿ ದೊರೆಯಲಿದೆ ಎನ್ನುವ ಈಕೆ, ಯೋಗಾಭ್ಯಸದ ಸಂದರ್ಭದಲ್ಲಿ ಮೇಕೆಗಳು ಮೈ ಮೇಲೆ ಹತ್ತಿ ಕೂರುವುದು ಜೊತೆಯಲ್ಲಿ ತೊಡೆಯ ಮೇಲೆ ಬಂದು ಕೂರುವುದರಿಂದ ಪ್ರಾಣಿಗಳೊಂದಿಗೆ ಬೇರೆಯುವ ಅವಕಾಶ ಸಿಗಲಿದೆ ಎನ್ನುವುದು ಆಕೆಯ ವಾದ. 

ಈಗಾಗಲೇ ಈ ಗೋಟ್ ಯೋಗ ಕ್ಲಾಸ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಮಂದಿ ಈ ಮಾದರಿಯಲ್ಲಿ ಯೋಗವನ್ನು ಕಲಿಯುವ ಆಸಕ್ತಿ ತೋರುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.