Asianet Suvarna News Asianet Suvarna News

ಮಹದಾಯಿ ವಿವಾದ: ಬಿಗಿನಿಲುವು ಸಡಿಲಿಸಿದ ಗೋವಾ; ಕರ್ನಾಟಕದ ಜೊತೆ ಮಾತುಕತೆಗೆ ಗೋವಾ ಸಿದ್ಧ?

ಅಮೆರಿಕದಿಂದ ಗೋವಾ ಸಿಎಂ ಮನೋಹರ್ ಪರ್ರಿಕರ್ ವಾಪಸ್ ಬಂದ ಬಳಿಕ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವರ ಸ್ಪಷ್ಟಪಡಿಸಿದ್ದಾರೆ.

goa ready to sit for talks with karnataka on mahadayi river dispute
  • Facebook
  • Twitter
  • Whatsapp

ಪಣಜಿ: ಮಹದಾಯಿ (ಕಳಸಾ-ಬಂಡೂರಿ) ವಿವಾದವನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನಿರಾಕರಿಸಿದ್ದ ಗೋವಾ ಸರಕಾರ ತನ್ನ ನಿಲುವನ್ನು ಬದಲಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಜಂಟಿಯಾಗಿ ಮಾತುಕತೆ ನಡೆಸಲು ಗೋವಾ ನಿರ್ಧರಿಸಿದೆ ಎಂದು ದ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ. ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಳ್ಯೇಕರ್ ಅವರು ಮಾತುಕತೆಗೆ ತಮ್ಮ ರಾಜ್ಯ ಮುಕ್ತವಾಗಿರುವುದಾಗಿ ತಿಳಿಸಿದರೆಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಆದರೆ, ಅಮೆರಿಕದಿಂದ ಗೋವಾ ಸಿಎಂ ಮನೋಹರ್ ಪರ್ರಿಕರ್ ವಾಪಸ್ ಬಂದ ಬಳಿಕ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವರ ಸ್ಪಷ್ಟಪಡಿಸಿದ್ದಾರೆ.

ಸಂಧಾನಕ್ಕೆ ಸಿದ್ಧವಿಲ್ಲವೆಂದಿದ್ದ ಗೋವಾ ಸಚಿವರು:
ಇದೇ ವೇಳೆ, ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನವನ್ನು ಗೋವಾ ಜಲಸಂಪನ್ಮೂಲ ಸಚಿವಾಲಯವು ತಿರಸ್ಕರಿಸಿದ ಸುದ್ದಿಯೂ ಕೇಳಿಬಂದಿದೆ.

ಗುರುವಾರ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಳ್ಯೇಕರ್ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, "ಕರ್ನಾಟಕದೊಂದಿಗೆ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ಯಾವುದೇ ಸಂಧಾನ ಮಾತುಕತೆಯನ್ನು ಗೋವಾ ನಡೆಸುವುದಿಲ್ಲ. ಯಾವುದೇ ಸಂಧಾನಕ್ಕೂ ನಾವು ಒಪ್ಪುವುದಿಲ್ಲ" ಎಂದು ತಿಳಿಸಿದ್ದಾರೆಂದು ಕನ್ನಡಪ್ರಭ ವರದಿ ಮಾಡಿದೆ.

‘ಇದು ನಮ್ಮ ಸಚಿವಾಲಯದ ಅಧಿಕೃತ ನಿಲುವಾಗಿದೆ. ಆದರೆ ಯಾವುದಕ್ಕೂ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರ ಜತೆ (ಸಿದ್ದರಾಮಯ್ಯ ಪತ್ರದ ಬಗ್ಗೆ) ಮಾತನಾಡಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಕರ್ನಾಟಕ ಈ ವಿಷಯದಲ್ಲಿ ಡಬಲ್ ಗೇಮ್ ಆಡುತ್ತಿದೆ. ಕರ್ನಾಟಕದ ಮುಖವಾಡವು ನ್ಯಾಯಾಧಿಕರಣದಲ್ಲಿ ಕಳಚಿದೆ’ ಎಂದೂ ಪಾಳ್ಯೇಕರ್ ಕಿಡಿಕಾರಿದ್ದಾರೆಂದು ಕ.ಪ್ರ. ವರದಿಯಲ್ಲಿ ಬರೆಯಲಾಗಿದೆ.

"ಮಹದಾಯಿ ನದಿಯು ಗೋವಾದ ಏಕಮಾತ್ರ ಜಲಮೂಲವಾಗಿದೆ. ಕರ್ನಾಟಕಕ್ಕೆ ಇಂಥ ಹಲವು ನದಿಗಳಿವೆ. ನ್ಯಾಯಾಧಿಕರಣದಲ್ಲಿ ತಿಳಿಸಿದ ಪ್ರಮಾಣಕ್ಕಿಂತ ಒಂದು ಹನಿ ಹೆಚ್ಚು ನೀರನ್ನೂ ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ," ಎಂಬುದು ಗೋವಾದ ಬಿಗಿಪಟ್ಟಾಗಿದೆ.

ನ್ಯಾಯಾಧಿಕರಣವು ನ್ಯಾಯಾಲಯದ ಆಚೆ ಮಾತುಕತೆಗಳ ಮೂಲಕ ವಿವಾದವನ್ನು ಶಮನ ಮಾಡಿಕೊಳ್ಳುವಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಲಹೆ ನೀಡಿತ್ತು. ಅದರಂತೆ, ಕಳೆದ ಬಾರಿ ಮಹಾರಾಷ್ಟ್ರ ಸರಕಾರವೇ ಮುಂದೆ ಬಂದು ಮಾತುಕತೆ ಪ್ರಕ್ರಿಯೆ ಆರಂಭಿಸಿ ಕೊನೆಗೆ ತಾನೇ ಹಿಂದೆ ಸರಿಯಿತು. ಈಗ ಕರ್ನಾಟಕ ಸರಕಾರವೇ ಮಾತುಕತೆಯ ಪ್ರಕ್ರಿಯೆಯನ್ನು ಕೈಗೆತ್ತುಕೊಂಡು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಆಹ್ವಾನ ನೀಡಿದೆ. ಮಹಾರಾಷ್ಟ್ರದ ಫಡ್ನವಿಸ್ ಸರಕಾರ ಮಾತುಕತೆಗೆ ಒಪ್ಪಿಕೊಂಡಿದೆ. ಗೋವಾದಿಂದ ಇನ್ನೂ ಅಧಿಕೃತ ನಿಲುವು ಬರಬೇಕಿದೆ.

epaperkannadaprabha.com

Follow Us:
Download App:
  • android
  • ios