ಗೋವಿಗಾಗಿ ನಿರಂತರವಾಗಿ ತುಡಿಯುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮಹತ್ವಾಕಾಂಕ್ಷೆಯ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ 'ಗೋ ಸ್ವರ್ಗ' ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾನ್ಕುಳಿ ಎಂಬಲ್ಲಿ ತಲೆ ಎತ್ತುತ್ತಿದ್ದು, ಮೇ 27 ರಂದು ಲೋಕಾರ್ಪಣೆಗೊಳ್ಳಲಿದೆ..
ವಸಂತಕುಮಾರ್ ಕತಗಾಲ
ಸಿದ್ದಾಪುರ: ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರದ ರಮಣೀಯ ಪರಿಸರ ಭೂಸ್ವರ್ಗದಲ್ಲಿ 'ಗೋ ಸ್ವರ್ಗ' ರೂಪುಗೊಳ್ಳುತ್ತಿದೆ. 100 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ಪ್ರದೇಶಕ್ಕೆ ಈಗಾಗಲೇ ನೂರಾರು ಗೋವುಗಳನ್ನು ತರಲಾಗಿದ್ದು, ಸಾವಿರ ಗೋವುಗಳು ಇಲ್ಲಿ ಆಶ್ರಯ ಪಡೆಯಲಿವೆ.
ಏನೇನಿವೆ ಇಲ್ಲಿ?:
ಗೋತೀರ್ಥ-ಗೋ ಸ್ವರ್ಗದ ಕೇಂದ್ರ ಭಾಗದಲ್ಲಿ ನೂರು ಅಡಿ ವಿಶಾಲವಾದ ಸರೋವರ, ಸಪ್ತ ಸನ್ನಿಧಿ-ಸರೋವರದ ನಡುವೆ ಶಿಲಾಮಯ ಮಂಟಪದಲ್ಲಿ ಜಲರೂಪದಲ್ಲಿ ನೆಲೆಸಿರುವ ಶ್ರೀರಾಮ ಮೊದಲಾದ ಏಳು ಮಹಾದೇವತೆಗಳ ಸನ್ನಿಧಿ, ಗೋಪದ-ಸರೋವರದ ನಾಲ್ಕೂ ದಿಕ್ಕುಗಳಲ್ಲಿ ಗೋವುಗಳ ಶ್ರವಣ ಸುಖಕ್ಕಾಗಿ ಮೀಸಲಾದ ನಾಲ್ಕು ಸತ್ಸಂಗ ವೇದಿಕೆಗಳು ಇರಲಿವೆ.

ಇದಲ್ಲದೆ, ಗೋವುಗಳು ನೆರಳಿನಲ್ಲಿ ವಿಶ್ರಾಂತಿ ಸುಖ ಪಡೆಯಲೆಂದು 30 ಸಾವಿರ ಚದರ ಅಡಿ ವಿಸ್ತೀರ್ಣದ ಗೋ ಶಾಲೆಯಾದ ಗೋವಿರಾಮ , 70 ಸಾವಿರ ಚದರ ಅಡಿಯಲ್ಲಿ ಗೋವುಗಳಿಗೆ ವಿಹರಿಸಲು ಗೋ ವಿಹಾರ, ನಿರಂತರವಾಗಿ ಮೇವನ್ನು ಒದಗಿಸುವ ಸದಾ ತೃಪ್ತಿ, ಕಾಯಂ ಆಗಿ ನೀರುಣಿಸುವ ಶಿಲಾತೊಟ್ಟಿ ಸುಧಾ ಸಲೀಲ, ತೀರ್ಥ ಸ್ನಾನದ ಘಟ್ಟ ಗೋ ಗಂಗಾ, ಗೋಪಾಲಕರ ವಸತಿಗಾಗಿ ನಿರ್ಮಿಸಲಾದ ಗೋಪಾಲ ಭವನ, ಸದಾ ಹರಿಯುವ ತೊರೆ ಗೋ ಧಾರಾ, ಚಂದದ ಉದ್ಯಾನ ಗೋ ನಂದನ, ವೀಕ್ಷಾ ಗೋಪುರ, ಸುಗ್ರಾಸ, ಗೋ ಚಿಕಿತ್ಸಾಲಯ ಹೀಗೆ ಹತ್ತು ಹಲವು ವಿಶೇಷತೆಗಳು ಗೋಸ್ವರ್ಗದಲ್ಲಿರಲಿವೆ.
ಯಾಕೆ ಇದೆಲ್ಲ?:
ಸ್ವಚ್ಛ ಪರಿಸರ ಇಲ್ಲದೆ ಗೋವುಗಳು ಅನುಭವಿಸುವ ಯಾತನೆ ನಿವಾರಣೆಗೆ ಸಂಕಲ್ಪ ಮಾಡಿ ಶ್ರೀಗಳು ಈ ಯೋಜನೆ ರೂಪಿಸಿದ್ದಾರೆ. ಈಗ ಸದಾಕಾಲ ಬಂಧನದಲ್ಲೆ ಗೋವುಗಳನ್ನು ಇಡಲಾಗುತ್ತದೆ. ಮೇವಿನ ಕೊರತೆ, ಅತಿಯಾದ ದುಡಿತ, ಕುಡಿಯಲೂ ನೀರಿಲ್ಲದ ಸಮಸ್ಯೆ, ಕೃತಕ ಗರ್ಭಧಾರಣೆಗಳಿಂದ ಸಹಜ ಸುಖಕ್ಕೆ ಆಗುತ್ತಿರುವ ಅಡ್ಡಿಯಿಂದ ಗೋವಿನ ಬದುಕು ನರಕವಾಗಿದೆ, ಜತೆಗೆ ಕರು ಹಾಗೂ ಗೋವನ್ನು ಬೇರ್ಪಡಿಸುವ ನೋವು ನಿವಾರಣೆಗೆ ಈ ಗೋ ಸ್ವರ್ಗ ರೂಪುಗೊಳ್ಳುತ್ತಿದೆ. ಬಾನ್ಕುಳಿಯಲ್ಲಿ ಈ ಗೋಸ್ವರ್ಗದ ಕಾಮಗಾರಿ ಭರದಿಂದ ನಡೆಯುತ್ತಿದೆ. ನೂರಾರು ಕೆಲಸಗಾರರು, ಯಂತ್ರೋಪಕರಣಗಳ ಮೂಲಕ ಕೆಲಸ ನಡೆಯುತ್ತಿದೆ. ಎಲ್ಲ ಕಾಮಗಾರಿಗಳ ಉಸ್ತುವಾರಿಯನ್ನು ಶ್ರೀಗಳೇ ವಹಿಸಿದ್ದಾರೆ.
ಇದೊಂದು ಪುಣ್ಯಸ್ಥಳ, ಪ್ರವಾಸಿ ತಾಣವಾಗಿಯೂ ರೂಪುಗೊಳ್ಳುತ್ತಿದೆ. ಮುಖ್ಯವಾಗಿ ಗೋವುಗಳ ಸ್ವಚ್ಛಂದ ಬದುಕಿನ ತಾಣವಾಗಿ ಈ ಗೋಸ್ವರ್ಗ ತಲೆ ಎತ್ತಲಿದೆ.
- ರಾಘವೇಶ್ವರ ಭಾರತೀ ಶ್ರೀಗಳು ರಾಮಚಂದ್ರಾಪುರ ಮಠ.
