Asianet Suvarna News Asianet Suvarna News

ಬುದ್ದಿವಂತರ ನಾಡಲ್ಲಿ ಹೆಣ್ಣು ಮಕ್ಕಳು ಡ್ರಗ್ಸ್ ಅಡಿಕ್ಟ್!

- ‘ಶಿಕ್ಷಣ ಕಾಶಿ’ಯಲ್ಲಿ ಹೈಸ್ಕೂಲ್, ಪಿಯು ವಿದ್ಯಾರ್ಥಿನಿಯರೂ ಮಾದಕ ವಸ್ತು ಬಲೆಗೆ

- ವರ್ಷದಿಂದ ವರ್ಷಕ್ಕೆ ಏರುತ್ತಿದೆ ವ್ಯಸನಿ ಯುವತಿಯರ ಸಂಖ್ಯೆ

Girls in coastal area are addicted to drugs
Author
Bengaluru, First Published Jul 31, 2018, 1:02 PM IST

ಬೆಂಗಳೂರು (ಜು. 31): ಐದು ವರ್ಷಗಳ ಹಿಂದೆ ಅಂದರೆ, 2013 ರ ಫೆಬ್ರವರಿ ತಿಂಗಳಲ್ಲಿ ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದ 18 ರ ಹರೆಯದ ಬಾಲಕಿಯೊಬ್ಬಳು ಡ್ರಗ್ಸ್, ತಂಬಾಕು, ಮದ್ಯ ಮತ್ತಿತರ ವ್ಯಸನಗಳಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದುವರೆಗೂ ಯುವಕರನ್ನು ಸೆಳೆದು ನಲುಗಿಸಿದ್ದ ಅಪಾಯಕಾರಿ ನಶೆಯಕಬಂಧ ಬಾಹು ಹೆಣ್ಣು ಮಕ್ಕಳನ್ನೂ ಆವರಿಸಿದ ಆತಂಕಕಾರಿ ವಿಚಾರ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದಲ್ಲದೆ, ಕರಾವಳಿಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು.

ಆಗಲೇ ಆಡಳಿತ, ಪೊಲೀಸ್ ವ್ಯವಸ್ಥೆ ಎಚ್ಚೆತ್ತುಕೊಂಡಿದ್ದರೆ ಇಂದು ಕರಾವಳಿಯುದ್ದಕ್ಕೂ ಮಾದಕ ವಸ್ತು ಜಾಲ ನಿಯಂತ್ರಿಸಲಾಗದ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಅದರಲ್ಲೂ ಹರೆಯದ ಹೆಣ್ಮಕ್ಕಳು ನಶೆಯ ಸುಳಿಯೊಳಗೆ ಸಿಲುಕಿ ದಾರಿ ತಪ್ಪುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಶಿಕ್ಷಣ ಕಾಶಿ, ಬುದ್ಧಿವಂತರ ನಾಡು ಎಂದೇ ಕರೆಸಿಕೊಳ್ಳುತ್ತಿರುವ ಅವಿಭಜಿತ ದ.ಕ. ಜಿಲ್ಲೆ ಈಗ ‘ಡ್ರಗ್ಸ್ ಕಾಶಿ’ಯಾಗಿಯೂ ಕುಖ್ಯಾತಿ ಗಳಿಸಿದೆ. ಬೆಂಗಳೂರು ಹೊರತುಪಡಿಸಿದರೆ ಮಾದಕ ವಸ್ತುಗಳಿಗೆ ಎರಡನೇ ದೊಡ್ಡ ಮಾರುಕಟ್ಟೆಯಾಗಿ ಕರಾವಳಿ, ಅದರಲ್ಲೂ ವಿಶೇಷವಾಗಿ ಮಂಗಳೂರು ನಗರ ಗುರುತಿಸಿಕೊಂಡಿದೆ. ವಿದೇಶಿ, ಹೊರರಾಜ್ಯ, ಪರವೂರಿನ ವಿದ್ಯಾರ್ಥಿಗಳು ಇಲ್ಲಿದ್ದರೂ ಮಾದಕ ವಸ್ತುಗಳಿಗೆ ಬಲಿಯಾಗಿರುವವರಲ್ಲಿ ಕರಾವಳಿಯ ನಗರವಾಸಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.

ವರ್ಷದಿಂದ ವರ್ಷಕ್ಕೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುತ್ತಿರುವಂತೆಯೇ ಈ ಜಾಲದೊಳಗೆ ಸಿಲುಕುತ್ತಿರುವ ಯುವತಿಯರ  ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ವ್ಯಸನಕ್ಕೆ ಸಿಲುಕಿದ ನೂರಾರು ಯುವತಿಯರು. ಮಾದಕ ವ್ಯಸನಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಯುವತಿಯರ ಮೇಲೆ ದಾಖಲಾಗಿಲ್ಲವಾದರೂ, ನೂರಾರು ಯುವತಿಯರು ಇದರ ಸುಳಿಗೆ ಸಿಲುಕಿದ್ದಾರೆ.

ಬಹುತೇಕರು 16 ರಿಂದ  20 ವರ್ಷ ಪ್ರಾಯದವರು. ಎಲ್ಲರೂ ಶಾಲೆ, ಕಾಲೇಜು ಶಿಕ್ಷಣ ಪಡೆಯುತ್ತಿರುವವರು ಎನ್ನುವುದೇ ಅಚ್ಚರಿಯ ವಿಚಾರ. ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅನೇಕ ವ್ಯಸನಮುಕ್ತ ಕೌನ್ಸೆಲಿಂಗ್ ಕೇಂದ್ರಗಳಲ್ಲಿ ಒಟ್ಟಾರೆಯಾಗಿ 15 ರಿಂದ 20 ದಿನಗಳಿಗೆ ಒಬ್ಬಿಬ್ಬರಂತೆ ವರ್ಷಕ್ಕೆ  ನೂರಿನ್ನೂರು ಯುವತಿಯರಾದರೂ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಅವರಲ್ಲಿ ಪಿಯು ಶಿಕ್ಷಣ  ಪಡೆಯುತ್ತಿರುವವರು ಹಾಗೂ ಕರಾವಳಿಗರೇ ಹೆಚ್ಚು ಎಂದು ಈ ಕೇಂದ್ರಗಳ ಮುಖ್ಯಸ್ಥರು ತಿಳಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮಂಗಳೂರು- ಮಣಿಪಾಲ ಕೇಂದ್ರಿತ ಕರಾವಳಿಯ ಡ್ರಗ್ಸ್ ಜಾಲವನ್ನು ಹತ್ತಿಕ್ಕುವುದು ಅಸಾಧ್ಯವಾಗುವ ಪರಿಸ್ಥಿತಿ ಎದುರಾಗಲಿದೆ.

‘ನಮ್ಮ ಕೇಂದ್ರಕ್ಕೆ ಮಾದಕ ವ್ಯಸನಗಳಿಗೆ ತುತ್ತಾದವರು ವಾರಕ್ಕೆ ಏನಿಲ್ಲವೆಂದರೂ 2 ರಿಂದ 3 ಮಂದಿ ಬರುತ್ತಾರೆ. ಯುವತಿಯರೂ ಬರುತ್ತಾರೆ. ಹೆಚ್ಚಿವರು ದೊಡ್ಡ ವೃತ್ತಿಪರ ಕಾಲೇಜಿನ ವಿದ್ಯಾರ್ಥಿಗಳು. ಯುವಕರ ಸಂಖ್ಯೆಗೆ ಹೋಲಿಸಿದರೆ ಯುವತಿಯರ ಸಂಖ್ಯೆ ಕಡಿಮೆಯಿದೆ. ಆದರೆ ಪ್ರತಿ ವರ್ಷ ವ್ಯಸನಕ್ಕೆ ತುತ್ತಾಗಿ ವೈಪರೀತ್ಯಕ್ಕೆ ಹೋಗುವ ಯುವತಿಯರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ’ ಎಂದು ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಹಿಲ್ಡಾ ರಾಯಪ್ಪನ್ ಹೇಳುತ್ತಾರೆ.

‘ಬಡ, ಮಧ್ಯಮ ವರ್ಗದವರು ಇದ್ದರೂ ಶ್ರೀಮಂತ ಕುಟುಂಬದ ಯುವಕ ಯುವತಿಯರೇ ಹೆಚ್ಚು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮ ಕೇಂದ್ರಕ್ಕೆ ಯುವತಿಯರನ್ನು ಕರೆದುಕೊಂಡು ಬಂದರೂ ದಾಖಲಿಸಿಕೊಳ್ಳಲು ತೊಡಕಿದೆ. ಅಂಥವರನ್ನು ಆಸ್ಪತ್ರೆಗಳಿಗೆ ಸೇರಿಸಲಾಗುತ್ತದೆ’ ಎಂದು ಲಿಂಕ್  ವ್ಯಸನಮುಕ್ತ ಕೇಂದ್ರದ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಮೆಲ್ವಿನ್ ತಿಳಿಸಿದರು.

ಯುವತಿಯರು ಕೇವಲ ಬಲಿಪಶು:

ಕಳೆದ ವರ್ಷ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ೨೭೮ ಮಾದಕ ವಸ್ತು ಜಾಲದ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ವ್ಯಸನ ಅಂಟಿಸಿಕೊಂಡು ಕೊನೆಗೆ ಪೆಡ್ಲರ್ಗಳಾಗಿ ಕ್ರಿಮಿನಲ್ ದಂಧೆಯಲ್ಲಿ ತೊಡಗಿಕೊಂಡ ಯುವಕರೂ ಇದ್ದಾರೆ. ಆದರೆ ನೂರಾರು ಸಂಖ್ಯೆಯಲ್ಲಿ ಯುವತಿಯರು ವ್ಯಸನ ಅಂಟಿಸಿಕೊಂಡಿದ್ದರೂ ಒಂದೇ ಒಂದು ಪ್ರಕರಣದಲ್ಲೂ ಯುವತಿಯರು ಆರೋಪಿಗಳಾಗಿಲ್ಲ.

ಮಾದಕ ವ್ಯಸನ ಜಾಲದಲ್ಲಿ ಯುವತಿಯರು ಕೇವಲ ಬಲಿಪಶುಗಳು ಎನ್ನುವುದನ್ನು ಇದು ಧ್ವನಿಸುತ್ತದೆ. ಡ್ರಗ್ಸ್ ಚಟಕ್ಕೆ ಒಳಗಾದ ಯುವಕ- ಯುವತಿಯರು ಗುಂಪುಗಳಲ್ಲಿ ಕಾರ್ಯಾಚರಿಸುವುದರಿಂದ ಸಮಾಜದ ನೈತಿಕ ಸಂಸ್ಕೃತಿಯ ದೃಷ್ಟಿಯಿಂದಲೂ ಅಪಾಯಕಾರಿಯಾಗಿ ಪರಿಣಿಮಿಸುತ್ತಿದೆ.

ಮನೆಯಲ್ಲೇ ಕೂಡಿ ಹಾಕ್ತಾರೆ:

‘ಅನೇಕ ಯುವಕ, ಯುವತಿಯರು 8, 9ನೇ ತರಗತಿಯಲ್ಲೇ ವ್ಯಸನಕ್ಕೆ ಅಂಟಿಕೊಳ್ಳುತ್ತಾರೆ. ಆದರೆ ಯುವಕರಾಗಲೀ, ಯುವತಿಯರಾಗಲಿ ಡ್ರಗ್ಸ್ ಚಟ ಹತ್ತಿಸಿಕೊಳ್ಳುವಂತೆ ಬಲಪ್ರಯೋಗ ಮಾಡಲಾಗುವುದಿಲ್ಲ. ಸ್ನೇಹಿತರ ಮೂಲಕ ಆಕರ್ಷಣೆಗೆ ಒಳಗಾಗಿ ದಾಸರಾಗುತ್ತಾರೆ. ಚಟಕ್ಕೆ ತುತ್ತಾದ ಕೆಲವು ಯುವತಿಯರು ಆಸ್ಪತ್ರೆಗಳ ಮಾನಸಿಕ ವಿಭಾಗಕ್ಕೆ ದಾಖಲಾಗುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ವಿಷಯ ಬೆಳಕಿಗೆ ಬರಬಾರದೆಂದು ಯುವತಿಯರನ್ನು ಹೆತ್ತವರೇ ಮನೆಯಲ್ಲಿ ಕೂಡಿ ಹಾಕುತ್ತಾರೆ. ಅಂತಹ ಬಹಳಷ್ಟು ಪ್ರಕರಣಗಳಿವೆ’ ಎಂದು ಡ್ರಗ್ಸ್ ವ್ಯಸನ ಮುಕ್ತರೊಬ್ಬರು ‘ಕನ್ನಡಪ್ರಭ’ದೊಂದಿಗೆ ಅನುಭವ ಹಂಚಿಕೊಂಡರು.  

 

-ಸಂದೀಪ್ ವಾಗ್ಲೆ 

Follow Us:
Download App:
  • android
  • ios